ವಿಶ್ವ ಕನ್ನಡ ಸಿನಿಮಾ ಹಬ್ಬದ ಸಂಭ್ರಮಾಚರಣೆ
ಸತಿ ಸುಲೋಚನ ಚಿತ್ರ ತೆರೆಗೊಂಡು ೯೦ ವರ್ಷಗಳಾಗುವ ಹಿನ್ನೆಲೆಯಲ್ಲಿ ವಿಶ್ವ ಕನ್ನಡ ಸಿನಿಮಾ ಹಬ್ಬವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರ ನಿರ್ದೇಶಕ ರಾಜೇಂದ್ರಸಿ0ಗ್ ಬಾಬು , ಪ್ರಸ್ತುತ ೪೦೦ ಸಿನಿಮಾ ಟಾಕೀಸ್ಗಳು ಇವೆ. ಇನ್ನೂ ೨ವರ್ಷದಲ್ಲಿ ಅವುಗಳು ಮುಚ್ಚು ಹೋಗಲಿದೆ. ಮಲ್ಟಿಪ್ಲೆಕ್ಸ್ಗಳಲ್ಲಿ ಪರಭಾಷೆ ಚಿತ್ರಗಳದೇ ಅಬ್ಬರ ಎಂದು ವಿಷಾದ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಚಿತ್ರ ನಗರಿ ಸ್ಥಾಪನೆಗೆ ನಕಾರಾತ್ಮಕ ಭಾವನೆಯನ್ನು ರಾಜ್ಯದ ಮುಖ್ಯಮಂತ್ರಿಗಳು ವ್ಯಕ್ತಪಡಿಸುತ್ತಿದ್ದಾರೆ. ತಾವು ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದಾಗ ತೀವ್ರ ತೊಂದರೆಯಲ್ಲಿರುವ ಕಲಾವಿದರಿಗೆ ತಲಾ ೭೫ ಸಾವಿರ ರೂ.ಗಳಂತೆ ಸಹಾಯ ಮಾಡುತ್ತಿದ್ದೆ, ಅದನ್ನು ಮುಂದುವರೆಸಿಕೊ0ಡು ಹೋಗಬೇಕೆಂದು ಈಗಿನ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಿಗೆ ಮನವಿ ಮಾಡಿದರು.
ಚಿತ್ರ ನಟಿ ಮತ್ತು ಮಾಜಿ ಸಚಿವೆ ಉಮಾಶ್ರೀ ಮಾತನಾಡಿ , ಚಲನಚಿತ್ರರಂಗದಲ್ಲಿ ಗುಬ್ಬಿ ವೀರಣ್ಣನವರು ಪ್ರಯೋಗಶೀಲರು. ಅವರು ಮೊಟ್ಟ ಮೊದಲ ಬಾರಿಗೆ ಕನ್ನಡ ಸಿನಿಮಾ ಕಾರ್ಪೋರೇಷನ್ ಸ್ಥಾಪಿಸಿದ ಕೀರ್ತಿ ಅವರಿಗಿದೆ ಎಂದರು.
ಪತ್ರಕರ್ತ ಗಂಗಾಧರ ಮೊದಲಿಯಾರ್ ಮಾತನಾಡಿ, ಕನ್ನಡ ಚಿತ್ರರಂಗ ಅತಿ ಎತ್ತರಕ್ಕೆ ತಲುಪಿಸುವಲ್ಲಿ ಪತ್ರಕರ್ತರ ಕಾಣಿಕೆ ಇಲ್ಲ. ಸಿನಿಮಾಗಳನ್ನು ಯಥಾರೀತಿ ಪ್ರಸ್ತುತ ಪಡಿಸುವಲ್ಲಿ ಪತ್ರಕರ್ತರು ಮುಂದಾಗಿದ್ದಾರೆ. ಪ್ಯಾನ್ ಇಂಡಿಯಾ ಸಿನಿಮಾಗಳು ೧೯೩೪ರ ಹಿಂದೆಯೇ ಪ್ರಾರಂಭವಾಯಿತು. ೧೯೨೯ರಲ್ಲಿ ವಸಂತಸೇನಾ ಎಂಬ ಚಿತ್ರವನ್ನು ಜರ್ಮಿನಿಯಲ್ಲಿ ಪ್ರದರ್ಶಿಸಲಾಯಿತು. ಕನ್ನಡದವರಾದ ವಿ.ಕೆ. ಮೂರ್ತಿಯವರು ಹಿಂದಿ ಚಿತ್ರರಂಗದಲ್ಲಿ ಛಾಯಗ್ರಾಹಕರಾಗಿ ತಮ್ಮ ಛಾಪನ್ನು ಮೂಡಿಸಿ ದಾದಾಸಾಹೇಬ್ ಪಾಲ್ಕೆ ಪ್ರಶಸ್ತಿಯನ್ನು ಪಡೆದಿದ್ದಾರೆ ಎಂದರು.
ಛಾಯಾಗ್ರಹಣ ಸಂಘದ ಅಧ್ಯಕ್ಷ ಜೆ.ಜೆ.ಕೃಷ್ಣ ಮಾತನಾಡಿ , ವಿಶ್ವ ಕನ್ನಡ ಸಿನಿಮಾ ಹಬ್ಬದ ದಿನದಂದು ಸ್ಟಾರ್ ನಟರು ಭಾಗವಹಿಸದಿರುವುದು ದುರಂತ. ಮುಂದಿನ ವರ್ಷ ಈ ದಿನವನ್ನು ಇನ್ನಷ್ಟು ವಿಜೃಂಭಣೆಯಿ0ದ ಆಚರಿಸಬೇಕು ಮತ್ತು ಈ ದಿನದಂದು ಎಲ್ಲ ಸಿನಿಮಾ ಶೂಟಿಂಗ್ ರದ್ದು ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಚಿತ್ರನಟಿಯರಾದ ಗಿರಜಾ ಲೋಕೇಶ್, ಭವ್ಯಾ, ಪದ್ಮವಾಸಂತಿ, ನಟರಾದ ಸುಂದರ್ರಾಜ್, ದೊಡ್ಡಣ್ಣ, ದತ್ತಣ್ಣ ಸೇರಿದಂತೆ ಹಲವು ಕಲಾವಿದರು ಭಾಗವಹಿಸಿದ್ದರು.