ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ “ಪ್ರಶಾಂತ್ ಗೌಡ”
ಸಾಕಷ್ಟು ಅವಮಾನದ ಹಾದಿಯಲ್ಲಿ ಸಾಗಿದ ಪ್ರಶಾಂತ್ ಗೌಡ ಈಗ ಉತ್ತಮ ಡ್ಯಾನ್ಸರ್ ಆಗಿ ಹೆಸರು ಪಡೆಯುವ ಹಾದಿಯಲ್ಲಿ ಸಾಗಿದ್ದಾರೆ. ಪ್ರಶಾಂತ್ ಗೌಡ ಮೂಲತ ಎಂ.ಬಿ.ಎ ಪದವೀಧರ. ಸಿನಿಮಾ ಕಲಾವಿದ ಆಗಬೇಕು ಎನ್ನುವ ಆಸೆಯಿಂದ ಅವರು ಸಾಕಷ್ಟು ಆಡಿಶನ್ ಗಳಲ್ಲಿ ಭಾಗವಹಿಸಿದ್ದರು. ಸುಮಾರು 150ರಷ್ಟು ಆಡಿಷನ್ ಗಳಲ್ಲಿ ಭಾಗವಹಿಸಿದರೂ ಚಾನ್ಸ್ ಸಿಗಲಿಲ್ಲ. ಕೊನೆಗೆ ತಮ್ಮದೇ ವಿಡಿಯೋ ಶುರುಮಾಡಿದ ಪ್ರಶಾಂತ್ ಗೌಡ ಕಲಾವಿದ ಆಗುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದರು.
ವಿಡಿಯೋ ಶುರು ಮಾಡಿದಾಗ ಜನರು ಕಪ್ಪಗೆ ಇದ್ದಾರೆ ಎಂದು ಮೂದಲಿಸಿದರು. ಆದರೆ ಇದನ್ನು ಲೆಕ್ಕಿಸದ ಅವರು ಇನ್ಸ್ಸ್ಟಾಗ್ರಾಮ್, ಯೂ ಟ್ಯೂಬ್ ನಲ್ಲಿ ವಿಡಿಯೋ ಹಾಕುತ್ತಲೇ ಹೋದರು. ಆರಂಭದಲ್ಲಿ ನೆಗೆಟಿವ್ ಕಮೆಂಟ್ ಬಂದ ಅವರಿಗೆ ಬಳಿಕ ಪಾಸಿಟಿವ್ ಕಮೆಂಟ್ ಬರಲು ಆರಂಭ ಆಯಿತು. ಕಠಾರಿವೀರ ಸುರಸುಂದರಾಂಗಿ ಚಿತ್ರದಲ್ಲಿ ಚಿಕ್ಕ ಪಾತ್ರ ಮಾಡಿದ ಅವರು ರಂಗಮಂದಿರದಲ್ಲಿ 6 ತಿಂಗಳ ಕಾಲ ತರಬೇತಿ ಪಡೆದರು. ಸೋಮು ಅವರಿಂದ ತರಬೇತಿ ಪಡೆದ ಅವರು ಸಿನಿಮಾ ಕಲಾವಿದ ಆಗುವ ನಿಟ್ಟಿನಲ್ಲಿ ಸಾಕಷ್ಟು ಯತ್ನಿಸಿದರಾದರೂ ಅವಮಾನ ಎದುರಾಯಿತು. ಅವರನ್ನು ರೀಲ್ಸ್ ಮಾಡಿದವರು ಎಂದೇ ಕರೆಯುತ್ತಿದ್ದರು. ಚಾನ್ಸ್ ಪಡೆಯಲು ಒಂದಷ್ಟು ಜನ ದುಡ್ಡು ಕೇಳಿದರು.
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡುತ್ತಿದ್ದ ಪ್ರಶಾಂತ್ ಗೌಡ ಅವರು ಕಲರ್ಸ್ ಕನ್ನಡದ ಡಾನ್ಸ್ ಚಾಂಪಿಯನ್ ಶಿಪ್ ಗೆ ಪ್ರಯತ್ನಿಸಿದರಾದರೂ ಅವರು ಆಯ್ಕೆ ಆಗಲಿಲ್ಲ. ಆದರೆ ಕೊನೆಗೂ ಅವರಿಗೆ ಉತ್ತಮ ಅವಕಾಶ ಸಿಕ್ಕಿತು. ಕಲರ್ಸ್ ಕನ್ನಡ ವಾಹಿನಿಯ ಗಿಚ್ಚಿ ಗಿಲಿಗಿಲಿ ಶೋ ಗೆ ಅವರು ಆಯ್ಕೆ ಆದರು. ಈಗ ಮೂರು ಎಪಿಸೋಡ್ ಪ್ರಸಾರ ಆಗಿದ್ದು, ಪ್ರಶಾಂತ್ ಗೌಡ ಕಲಾವಿದ ಎನಿಸಿಕೊಳ್ಳುವ ಹಾದಿಯಲ್ಲಿ ಮುಂದುವರೆದಿದ್ದಾರೆ.