ಶ್ರೀ ಕ್ಷೇತ್ರ ಕೈವಾರ ತಾತಯ್ಯ ದೇವನಹಳ್ಳಿಯಂತಹ ಚಿತ್ರವನ್ನು ನಿರ್ದೇಶಿಸಿದ ಪಲ್ಲಕ್ಕಿ ರಾಧಾಕೃಷ್ಣ ಈದೀಗ ವೀರ್ ಸಾವರ್ಕರ್ ಕುರಿತಾದ ಜೀವನ ಚರಿತ್ರೆ ಆಧಾರಿತ ಚಿತ್ರವನ್ನು ನಿರ್ದೇಶಿಸಲು ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದ ವೀರ್ ಸಾವರ್ಕರ್ ಪಾತ್ರದಲ್ಲಿ ಖ್ಯಾತ ಗಾಯಕಿ ಬಿ.ಕೆ. ಸುಮಿತ್ರ ಅವರ ಪುತ್ರ ಎಕ್ಸ್ಕ್ಯೂಸಮಿ ಖ್ಯಾತಿಯ ನಟ ಸುನಿಲ್‌ರಾವ್ ಅಭಿನಯಿಸಲಿದ್ದಾರೆ.

ವೀರ ಸಾವರ್ಕರ್ ಚಿತ್ರದ ಕುರಿತಂತೆ ಮಾತನಾಡಿದ ಸುನಿಲ್‌ರಾವ್ ಒಬ್ಬ ನಟನಿಗೆ ಮಹತ್ತರ ಪಾತ್ರ ನಿರ್ವಹಿಸಬೇಕೆಂಬ ಗಮ್ಯ ಇದ್ದೇ ಇರುತ್ತೆ. ಆದರೆ, ಅಂತಹ ಅವಕಾಶ ಸಿಗುವುದು ಬಹಳ ಅಪರೂಪ. ನನಗೆ ಅಂತಹ ಅವಕಾಶ ಸಿಕ್ಕಿರುವುದು ಬಹಳ ಅದೃಷ್ಣ ಎಂದರು.

ಭಾರತ ಸ್ವಾತಂತ್ರಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಇತಿಹಾಸ ಪ್ರಸಿದ್ದ ವ್ಯಕ್ತಿ ವೀರ್ ಸಾವರ್ಕರ್ ಪಾತ್ರಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಶ್ರಮ ಹಾಕಿ ಅಭಿನಯಿಸುತ್ತೇನೆ ಎಂದು ಹರ್ಷ ವ್ಯಕ್ತಪಡಿಸಿದರು. ನಂತರ ಮಾತನಾಡಿದ ನಿರ್ದೇಶಕ ಪಲ್ಲಕ್ಕಿ ರಾಧಾಕೃಷ್ಣ ಸತತ ಆರು ತಿಂಗಳುಗಳ ಕಾಲ ವೀರ್ ಸಾವರ್ಕರ್ ಕುರಿತಾಗಿ ಮಾಹಿತಿಗಳನ್ನು ವಿಶ್ಲೇಷಿಸಿ ಚಿತ್ರಕಥೆ ಹಣಿಯಲಾಗಿದೆ ಎಂದರು.
ಇದೇ ಮಾರ್ಚ್ ೨೫ರಿಂದ ವೀರ್ ಸಾವರ್ಕರ್ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ.

ರಣದೀಪ್ ಹೂಡಾ ಅಭಿನಯದ ಸ್ವಾತಂತ್ರ ವೀರ್ ಸಾವರ್ಕರ್ ಬಯೋಪಿಕ್ ಕುರಿತಾದ ಹಿಂದಿ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಮೇ ತಿಂಗಳಲ್ಲಿ ಚಿತ್ರ ಬಿಡುಗಡೆಗೊಳ್ಳಲಿದೆ. ಈ ಚಿತ್ರವನ್ನು ಮಹೇಶ್ ಮಾಂಜ್ರೇಕರ್ ನಿರ್ದೇಶಿಸಿದ್ದಾರೆ.
