೨೦೨೨ರಲ್ಲಿ ಕಲೆಕ್ಷನ್‌ನಲ್ಲಿ ದಾಖಲೆ ನಿರ್ಮಿಸಿದ ಕನ್ನಡ ಚಿತ್ರಗಳು

Share

ಕನ್ನಡ ಚಿತ್ರರಂಗಕ್ಕೆ ೨೦೨೨ ವರ್ಷ ಅದೃಷ್ಟದಾಯಕ ಎಂದು ಪರಿಣಮಿಸಿದೆ. ಇದಕ್ಕೆ ಕಾರಣವೆಂದರೆ ಈ ವರ್ಷ ಇಡೀ ಭಾರತೀಯ ಚಿತ್ರರಂಗವೇ ತಿರುಗಿ ನೋಡುವಂತೆ ಮಾಡಿದ್ದು ಕನ್ನಡ ಚಿತ್ರರಂಗ.ಕೆಜಿಎಫ್ -೨ ಚಿತ್ರದಿಂದ ಆರಂಭವಾದ ಕನ್ನಡ ಚಿತ್ರರಂಗದ ಯಶಸ್ಸಿನ ಯಾತ್ರೆ ಕಾಂತಾರದವರೆಗೆ ಭರ್ಜರಿಯಾಗಿರುವ ಸಾಗಿರುವ ಮೂಲಕ ಸಿನಿಮಾ ಮಂದಿಯ ವಿಶ್ವಾಸ ಮತ್ತು ಭರವಸೆಯನ್ನು ಮೂಡಿಸಿದೆ.
ಕೆಜಿಎಫ್-೨ ಚಿತ್ರವು ನಿರೀಕ್ಷೆಯಂತೆಯೇ ದೊಡ್ಡ ಮಟ್ಟದ ಹಿಟ್ ಆಯಿತು. ಸುಮಾರು ಒಂದೂವರೆ ಸಾವಿರ ಅಧಿಕ ಕಲೆಕ್ಷನ್ ಮಾಡುವ ಮೂಲಕ ಸ್ಯಾಂಡಲ್‌ವುಡ್ ಯಾರಿಗೂ ಕಮ್ಮಿ ಇಲ್ಲ ಎಂದು ಬಿಂಬಿಸಿದ್ದು ಈ ಸಿನಿಮಾದ ಹೆಚ್ಚುಗಾರಿಕೆ. ಒಂದು ಮಾಸ್ ಸಿನಿಮಾವಾಗಿ ಕೆಜಿಎಫ್-೨ ಇಡೀ ದೇಶದ ಗಮನ ಸೆಳೆದು, ಭಾಷೆಯ ಗಡಿಯನ್ನು ಮೀರಿ ಗೆಲ್ಲುವ ಮೂಲಕ ಸಿನಿಮಾ ತಾಕತ್ತು ಪ್ರದರ್ಶಿಸಿತು. ಈ ವರ್ಷದ ಮತ್ತೊಂದು ಬಿಗ್ ಹಿಟ್ ಎಂದರೆ ಅದು ಕಾಂತಾರ ಚಿತ್ರ ಎಲ್ಲಾ ವರ್ಗದ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತಂದು, ದೊಡ್ಡ ಯಶಸ್ಸು ಕಂಡಿತು. ಇನ್ನು ರಕ್ಷಿತ್ ಶೆಟ್ಟಿ ನಟನೆಯ ೭೭೭ ಚಾರ್ಲಿ, ವಿಕ್ರಾಂತ್ ರೋಣ, ಗಾಳಿಪಟ-೨ ಸೇರಿದಂತೆ ಒಂದಷ್ಟು ಚಿತ್ರಗಳು ಪರಭಾಷಾ ಮಂದಿ ಸ್ಯಾಂಡಲ್‌ವುಡ್‌ನತ್ತ ತಿರುಗಿ ನೋಡುವಂತೆ ಮಾಡುವ ಜೊತೆಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವಲ್ಲಿ ಯಶಸ್ವಿಯಾದವು.

ಐದು ಪ್ಯಾನ್ ಇಂಡಿಯಾ ಸಿನಿಮಾಗಳು: ೨೦೨೨ರಲ್ಲಿ ಕನ್ನಡದಿಂದ ಐದು ಪ್ಯಾನ್ ಇಂಡಿಯಾ ಚಿತ್ರಗಳು ಬಿಡುಗಡೆಯಾಗಿವೆ.ಈ ಮೂಲಕ ಸ್ಯಾಂಡಲ್‌ವುಡ್ ಭಾರತೀಯ ಚಿತ್ರರಂಗದಲ್ಲಿ ಮಿಂಚುತ್ರಿದೆ. ಕೆಜಿಎಫ್-೨, ೭೭೭ ಚಾರ್ಲಿ, ಜೇಮ್ಸ್, ವಿಕ್ರಾಂತ ರೋಣ ಹಾಗೂ ಕಾಂತಾರ ಚಿತ್ರಗಳು ಈ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾಗಿವೆ.

ಅತಿ ಹೆಚ್ಚು ಕಲೆಕ್ಷನ್ ಕಂಡ ವರ್ಷ: ಕನ್ನಡ ಸಿನಿಮಾಗಳು ಹೊರರಾಜ್ಯ, ಹೊರದೇಶಗಳಲ್ಲಿ ಸದ್ದು ಮಾಡಿದ್ದು ಒಂದಾದರೆ, ಕನ್ನಡ ಸಿನಿಮಾಗಳು ಈ ಮಟ್ಟಕ್ಕೆ ಕಲೆಕ್ಷನ್ ಮಾಡಬಲ್ಲವು ಎಂದು ತೋರಿಸಿದ್ದು ಈ ವರ್ಷದ ಹೆಗ್ಗಳಿಕೆ. ಕೆಜಿಎಫ್-೨, ೭೭೭ ಚಾರ್ಲಿ, ವಿಕ್ರಾಂತ ರೋಣ, ಕಾಂತಾರ ಚಿತ್ರಗಳು ಭರ್ಜರಿ ಕಲೆಕ್ಷನ್ ಮಾಡುವ ಮೂಲಕ ಕನ್ನಡದ ತಾಕತ್ತು ತೋರಿಸಿವೆ. ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಯಾವ ವರ್ಷವೂ ಇಷ್ಟೊಂದು ಮಟ್ಟದ ಬಿಝಿನೆಸ್ ಆಗಿರಲಿಲ್ಲ. ಜೇಮ್ಸ್ ೧೦೦ ಕೋಟಿ ರೂ. ಕಲೆಕ್ಷನ್ ಮಾಡಿದರೆ, ವಿಕ್ರಾಂತ ರೋಣ ೧೫೦ ಕೋಟಿ ರೂ. ಕಲೆಕ್ಷನ್ ಮಾಡಿದೆ. ಕಾಂತಾರ ಚಿತ್ರದ ಕನ್ನಡ ಅವತರಣಿಕೆ ರಾಜ್ಯವೊಂದರಲ್ಲೇ ೧೭೨ ಕೋಟಿ ರೂಪಾಯಿಗೂ ಅಧಿಕ ಗಳಿಕೆ ಮಾಡಿ , ಮೊದಲ ಸ್ಥಾನದಲ್ಲಿದ್ದರೆ, ವರ್ಲ್ಡ್ ವೈಡ್ ೧೫೦೦ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ ಯಶ್ ನಟನೆಯ ‘ಕೆಜಿಎಫ್-೨’ ಚಿತ್ರದ ಕನ್ನಡ ಅವತರಣಿಕೆ ೧೬೨ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಎರಡು ಚಿತ್ರಗಳನ್ನು ಹೊಂಬಾಳೆ ಫಿಲಂಸ್ ನಿರ್ಮಿಸಿದ್ದು, ತನ್ನ ದಾಖಲೆಯನ್ನು ತಾನೇ ಮುರಿದಿದೆ.

ಕಾಂತಾರ ಹವಾ: ಕಾಂತಾರ ಯಾವುದೇ ನಿರೀಕ್ಷೆ ಇಲ್ಲದೇ, ಮೀಡಿಯಂ ಬಜೆಟ್‌ನಲ್ಲಿ ತಯಾರಾಗಿ ಬಿಡುಗಡೆಯಾದ ಚಿತ್ರ ೪೦೦ ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದ್ದು ಒಂದೆಡೆಯಾದರೆ ಈ ಚಿತ್ರ ಸೃಷ್ಟಿಸಿದ ಹವಾ ಮತ್ತೊಂದೆಡೆ. ಎಲ್ಲಾ ವರ್ಗದ ಜನರನ್ನು ಸೆಳೆಯುವಲ್ಲಿ ಕಾಂತಾರ ಯಶಸ್ವಿಯಾಗಿದೆ. ೨೦-೩೦ ವರ್ಷಗಳಿಂದ ಚಿತ್ರಮಂದಿರಕ್ಕೆ ತಲೆ ಹಾಕಿಯೂ ಮಲಗಿರದ ಅದೆಷ್ಟೋ ಮಂದಿಯನ್ನು ಚಿತ್ರಮಂದಿರಕ್ಕೆ ಕರೆತಂದಿದ್ದು ಈ ಚಿತ್ರದ ಹೆಚ್ಚುಗಾರಿಕೆ. ಇಡೀ ಕುಟುಂಬಸಮೇತ ಜೊತೆಯಾಗಿ ಕುಳಿತು ಎಂಜಾಯ್ ಮಾಡುವಂತೆ ಮಾಡಿದ್ದು ಕಾಂತಾರ ಹೆಗ್ಗಳಿಕೆ. ಕಾಂತಾರ ಚಿತ್ರವು ಬೇರೆ ಭಾಷೆಯಲ್ಲಿ ಬಿಡುಗಡೆಗೊಂಡು ಅಲ್ಲಿಯೂ ಯಶಸ್ವಿಯಾಗಿ ದಾಖಲೆಯನ್ನು ನಿರ್ಮಿಸಿದೆ.

ಪುನೀತ್ ಕೊನೆಯ ಕನಸು ಬಿಡುಗಡೆ: ಪುನೀತ್ ರಾಜಕುಮಾರ್ ಅವರ ಕೊನೆಯ ಕನಸು ಬಿಡುಗಡೆಯಾಗಿದ್ದು ೨೦೨೨ರಲ್ಲಿ. ಪ್ರಕೃತಿ ಕುರಿತು ಪುನೀತ್ ರಾಜ್‌ಕುಮಾರ್ ತಮ್ಮ ಪಿಆರ್‌ಕೆ ಮೂಲಕ ನಿರ್ಮಿಸಿದ ಗಂಧದಗುಡಿ ಸಾಕ್ಷö್ಯಚಿತ್ರ ಅಕ್ಟೋಬರ್‌ನಲ್ಲಿ ತೆರೆಕಂಡಿತು. ಇಲ್ಲಿ ಪುನೀತ್ ರಾಜ್‌ಕುಮಾರ್ ನಮ್ಮ ನಾಡಿನ ಪ್ರಕೃತಿ ಸೌಂದರ್ಯವನ್ನು ತೆರೆದಿಟ್ಟಿದ್ದಾರೆ.

Leave a Comment