ಜನರಪ್ರೀತಿಯಲ್ಲಿ ಮಿಂಚಿ ಮೆರೆದ ಸೃಜನಶೀಲತೆಯ ಮಹಾತಾರೆ, ನಮ್ಮ “ಶಂಕರ್ ನಾಗ್ “..!!

Share

ಇವರು ನಿಜಕ್ಕೂ ಅಚ್ಚರಿಯ ಸೂಪರ್‌ಸ್ಟಾರ್. ಸೋಜಿಗವೆಂದರೆ… ವೃತ್ತಿ ಬದುಕಿನಲ್ಲಿ ಎಂದಿಗೂ ಸೂಪರ್‌ಸ್ಟಾರ್ ಆಗಲಿಲ್ಲಾ. ಆದರೆ ಸಾವಿನ ನಂತರ ದಶಕಗಳೇ ಕಳೆದರೂ ಕೂಡ ಜನಮಾನಸದಲ್ಲಿ ಗಟ್ಟಿಯಾಗಿ ನೆಲೆ ನಿಂತು ಈಗಲೂ ಒಬ್ಬ ಸೂಪರ್‌ಸ್ಟಾರ್ ಎಂದೇ ಕರೆಸಿಕೊಂಡಿರುವ ಅನನ್ಯ ಪ್ರತಿಭೆ ಮತ್ತು ಅತ್ಯಂತ ವೈಶಿಷ್ಟಮಯ ವ್ಯಕ್ತಿತ್ವದ ಏಕಮೇವ ಕನ್ನಡದ ಸೂಪರ್ ಸ್ಟಾರ್ ಎಂದರೆ ಅದು ದಿವಗಂತ ಶಂಕರನಾಗ್ ಉರುಫ್ ಶಂಕರಣ್ಣ. ಸಾರ್ವಕಾಲಿಕ ಸರ್ವಶ್ರೇಷ್ಠ ಸೂಪರ್ ಸ್ಟಾರ್‌ಗಳ ಪಟ್ಟಿಯಲ್ಲಿ ನಿಜಕ್ಕೂ ನಮಗೂ ಅಚ್ಚರಿಯಾಗುವಂತೆ ರಾರಾಜಿಸಿದ ಏಕೈಕ ಸೂಪರ್ ಸ್ಟಾರ್ ಎಂದರೆ ನಮ್ಮ ಶಂಕರನಾಗ್.

ಅತ್ಯಂತ ಬುದ್ಧಿವಂತ ಕ್ರಿಯಾಶೀಲ ವರ್ಗದ ಜನರಿಗೇ ಆಗಲಿ ಅಥವಾ ಆಟೋ ಚಾಲಕ ವರ್ಗ ದಂತಹ ಸಾಮಾನ್ಯ ಜನರ ವರ್ಗದಲ್ಲಿಯೇ ಆಗಲಿ, ಎರಡೂ ರೀತಿಯ ಜನಗಳನ್ನು ಏಕರೀತಿಯಲ್ಲಿ ಆಕರ್ಷಿಸಿದಾತ ಶಂಕರಣ್ಣ…!!!

ದಶಕಗಳೇ ಉರುಳಿ ಹೋದರೂ ಇಂದಿಗೂ ಶಂಕರಣ್ಣ ಕನ್ನಡಿಗರ ಜನಮಾನಸದಲ್ಲಿ ಹೀಗೆ ನೆಲೆ ನಿಂತದ್ದು ಹೇಗೆ..? ಅತ್ಯಂತ ಬುದ್ಧಿವಂತ ಕ್ರಿಯಾಶೀಲ ವರ್ಗದ ಜನರಿಗೇ ಆಗಲಿ ಅಥವಾ ಆಟೋ ಚಾಲಕ ವರ್ಗ ದಂತಹ ಸಾಮಾನ್ಯ ಜನರ ವರ್ಗದಲ್ಲಿಯೇ ಆಗಲಿ, ಎರಡೂ ರೀತಿಯ ಜನಗಳನ್ನು ಏಕರೀತಿಯಲ್ಲಿ ಆಕರ್ಷಿಸಿದಾತ ಶಂಕರಣ್ಣ. ಈಗಲು ಬಹುತೇಕರ ಮೊಗದಲ್ಲಿ ಶಂಕರಣ್ಣ ಎಂದ ಕೂಡಲೇ ಚಕ್ಕನೆ ಕಣ್ಣಲ್ಲಿ ಮೆಚ್ಚುಗೆಯ ಮಿಂಚೊAದು ಸುಳಿದು ಹೋಗುವುದು ಅತ್ಯಂತ ಸಹಜ.


ಇಷ್ಟಕ್ಕೂ ಜನರನ್ನು ಆ ಮಟ್ಟಕ್ಕೆ ಶಂಕರಣ್ಣ ಸೆಳೆದದ್ದು ಯಾವ ಕಾರಣಕ್ಕಾಗಿ? ಈ ಕ್ಷಣಕ್ಕೆ ಜ್ಞಾನಿ ಎನ್ನುವ ಮರುಕ್ಷಣ ಮುಗ್ಧ ಎನಿಸುವ ತನ್ನ ಮೋಹಕ ನಗೆಯಿಂದಲಾ, ಅಥವಾ ಹಲ್ಲು ಬಿಗಿ ಹಿಡಿದು ಮಾತನಾಡುವ ತನ್ನದೇ ವಿಶಿಷ್ಟ ಶೈಲಿಯ ಗೊಗ್ಗರು ಧ್ವನಿಯ ಮಾತುಗಳಿಂದಲಾ ? ಅಥವಾ ತನ್ನ ಹಾವಭಾವದಲ್ಲಿ ಇಂದಿಗೂ ತನ್ನದೇ ವಿಶಿಷ್ಟ ಸ್ಟೈಲ್ ಅನುಸರಿಸಿದ್ದರಿಂದಲಾ? ತನ್ನ ವಿನೂತನ ಚಿಂತನೆಗಳಿಂದಲಾ? ಅಥವಾ ತನ್ನ ಸ್ನೇಹಮಯ ವ್ಯಕ್ತಿತ್ವದಿಂದಲಾ? ಅಥವಾ ಪ್ರತಿಯೊಂದು ವಿಚಾರದಲ್ಲಿಯೂ ಆಳಕ್ಕಿಳಿದು ಧೇನಿಸುವ ಮತ್ತು ಅದನ್ನು ಕಾರ್ಯರೂಪಕ್ಕೆ ತರುವ ಹುಮ್ಮಸ್ಸಿನಿಂದಲಾ..? ಇಲ್ಲ… ಶಂಕರನಾಗ್‌ರನ್ನು ಮೆಚ್ಚಿಕೊಳ್ಳಲು ಇದೊಂದೇ ಕಾರಣ ಎನ್ನುವಂತಿಲ್ಲ.

ಚಿತ್ರರಂಗ ಕಂಡ ಸೂಪರ್ ಸ್ಟಾರ್ ಎನ್ನುವದಕ್ಕಿಂತ ಸೂಪರ್ ಹ್ಯೂಮನ್‌ಬೀಯಿಂಗ್….!!

ಆತ ವೈಯಕ್ತಿಕವಾಗಿ ಬಹುಮುಖ ಪ್ರತಿಭೆ. ಒಬ್ಬ ನಟನಿಗೆ, ಒಬ್ಬ ತಾರೆಗೆ ಇರಬೇಕಾದ ಎಲ್ಲ ಲಕ್ಷಣಗಳನ್ನು ಇಟ್ಟುಕೊಂಡು, ಇನಿತಾದರೂ ಅಹಂಕಾರವಿಲ್ಲದೇ, ಮರೆತಾದರೂ ಯಾರನ್ನೂ ನೋಯಿಸದೇ, ಯಾರಿಗೆ ಆದರೂ ಅವಮಾನಿಸಬೇಕು ಧ್ವೇಷಿಸಬೇಕು ಎಂಬ ಭಾವನೆಗೆ ಅವಕಾಶ ಕೊಡದಂತೆ, ಕ್ಷಣಗಳಲ್ಲೇ ಆತ್ಮೀಯವಾಗುವ ಶಂಕರನಾಗ್.. ಚಿತ್ರರಂಗ ಕಂಡ ಸೂಪರ್ ಸ್ಟಾರ್ ಎನ್ನುವದಕ್ಕಿಂತ ಸೂಪರ್ ಹ್ಯೂಮನ್‌ಬೀಯಿಂಗ್ ಎನ್ನಬೇಕು.

ತನ್ನ ಅಣ್ಣ ಅನಂತನಾಗ್‌ಗಿಂತ ಶ್ರೇಷ್ಠ ಅಭಿನಯ ನೀಡಲು ಶಂಕರಣ್ಣನಿಗೆ ಎಂದಿಗೂ ಸಾಧ್ಯವಾಗಲಿಲ್ಲ…..!

ತನ್ನ ಅಣ್ಣ ಅನಂತನಾಗ್‌ಗಿಂತ ಶ್ರೇಷ್ಠ ಅಭಿನಯ ನೀಡಲು ಶಂಕರಣ್ಣನಿಗೆ ಎಂದಿಗೂ ಸಾಧ್ಯವಾಗಲಿಲ್ಲ ನಿಜ. ಆತ ಎಂದಿಗೂ ಅದ್ಭುತ ಅಭಿನಯಪಟು ಎಂದು ಹೇಳಲೂ ಸಾಧ್ಯವಿಲ್ಲ. ಆದರೆ ಶಂಕರನಾಗ್ ಅಭಿನಯಿಸಿದ ಚಿತ್ರಗಳೆಲ್ಲವನ್ನೂ ಒಮ್ಮೆ ಗಮನಿಸಿ ನೋಡಿದರೆ ಪಾತ್ರಗಳಿಗೇ ಹೊಸ ರೂಪ ಕೊಡುವ ಆತನ ವಿಶಿಷ್ಠ ಶೈಲಿಯನ್ನು ಬೇರೆ ಯಾರಿಂದಲೂ ಅನುಕರಿಸಲು ಸಾಧ್ಯವೇ ಇಲ್ಲ. ಅಭಿನಯಕ್ಕೆ ಆತ ಹೊಸ ಭಾಷ್ಯ ಬರೆದಾತ ಎಂದೇ ಹೇಳಬಹುದು. ಜನಸಾಮಾನ್ಯರು ಪಾತ್ರದಿಂದ ದೂರ ನಿಂತು ನೋಡುವ ಬದಲು ತಾವೇ ಪಾತ್ರವಾಗಿ ಕುಳಿತುಕೊಳ್ಳುವಂತಹ ರೀತಿಯಲ್ಲಿ ಶಂಕರ್‌ನಾಗ್ ನೋಡುಗನನ್ನು ಆವರಿಸಿಕೊಳ್ಳುತ್ತಿದ್ದರು.

ಶಂಕರನಾಗ್ ಒಬ್ಬ ಸಹಜ ನಟ…!!!

ಆ ಸಿಟ್ಟು, ಪ್ರೀತಿ, ನಗು ಎಲ್ಲವೂ ಕೂಡ ಒಬ್ಬ ಸಾಮಾನ್ಯ ಮನುಷ್ಯ ಸಾಮಾನ್ಯನಾಗಿದ್ದುಕೊಂಡೇ ಅಸಾಮಾನ್ಯ ವೈಶಿಷ್ಟö್ಯ ಹೊಂದಲು ಬಯಸಿದರೆ ಹೇಗಿರುತ್ತದೆಯೋ ಅದರ ಪ್ರತಿರೂಪವಾಗಿರುತ್ತಿತ್ತು. ಇನ್ನೂ ಪರಾಮರ್ಶಿಸಿ ಹೇಳುವುದಾದರೆ ಶಂಕರನಾಗ್ ಒಬ್ಬ ಸಹಜ ನಟ. ಆತ ಎಂದೂ ನಟಿಸುತ್ತಿದ್ದಾನೆ ಎಂದು ಅನಿಸುತ್ತಲೇ ಇರಲಿಲ್ಲ. ಎಲ್ಲೂ ಕೂಡ ಮಿತಿಮೀರಿದ ನಾಟಕೀಯ ಭಾವೋದ್ವೇಗ ಇರುತ್ತಿರಲಿಲ್ಲ. ಜನರನ್ನು ನಗಿಸಲೇಬೇಕು, ಅಳಿಸಲೇ ಬೇಕು, ಅವರ ಮನಸು ಗೆಲ್ಲಲೇಬೇಕು ಎಂಬ ಹಠ ತೊಟ್ಟು ಅಭಿನಯದಲ್ಲಿ ನಾವೀನ್ಯತೆ ತರಲು ಶಂಕರನಾಗ್ ಯೋಚಿಸಿದಂತೆ ಕಾಣುವುದೇ ಇಲ್ಲ. ಸತ್ಯವಾಗಿ ಅವರ ಬದುಕಿನ ಭಾವಲಹರಿ ಎಂತಿತ್ತೋ ಅವರ ಅಭಿನಯವೂ ಕೂಡ ಹಾಗೆಯೇ ಇತ್ತು. ಎ ಗ್ರೇಟ್ ಸೆಲ್ಯೂಟ್ ಟು ಶಂಕರನಾಗ್…!!

‘ಒಂದಾನೊಂದು ಕಾಲದಲ್ಲಿ’ ಎಂಬ ಆಫ್‌ಬೀಟ್ ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದ ಶಂಕರನಾಗ್ ಮೊದಲಿಗೆ ಮನೆ ಮಾತಾಗಿದ್ದು ‘ಸೀತಾ ರಾಮು’ ಚಿತ್ರದಿಂದ,,,!

`ಒಂದಾನೊಂದು ಕಾಲದಲ್ಲಿ’ ಎಂಬ ಆಫ್‌ಬೀಟ್ ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದ ಶಂಕರನಾಗ್ ಮೊದಲಿಗೆ ಅತ್ಯಂತ ಮನೆಮಾತಾಗಿದ್ದು ‘ಸೀತಾ ರಾಮು’ ಚಿತ್ರದಿಂದ. ಅತ್ತ ಅಣ್ಣ ಅನಂತ್‌ನಾಗ್ ಕೌಟುಂಬಿಕ ಮತ್ತು ಭಾವುಕ ಚಿತ್ರಗಳ ಮೂಲಕ ಹೆಂಗಳೆಯರನ್ನು ಆಕರ್ಷಿಸುತ್ತಾ ಹೋದರೆ, ತಮ್ಮ ಶಂಕರ್‌ನಾಗ್ ಕನ್ನಡಕ್ಕೆ ಒಬ್ಬ ಆಕ್ಷನ್ ಹೀರೋ ಆಗಿ, ಮಾರ್ಶಲ್ ಆರ್ಟ್ಸ್ ಗೊತ್ತಿಲ್ಲದಿದ್ದರೂ ಕರಾಟೆ ಕಿಂಗ್ ಎಂದು ಕರೆಸಿಕೊಳ್ಳುತ್ತಾ, ತಮ್ಮ ವಿಚಿತ್ರ ಮ್ಯಾನರಿಸಂಗಳ ನೃತ್ಯಗಳಲ್ಲಿ ರಂಜಿಸುತ್ತಾ.. ದೊಡ್ಡ ಸ್ಟಾರ್ ಆಗಿ ಬೆಳೆಯುತ್ತಾ ಬಂದರು. ಆ ನಂತರ ಬೇಕಾದಷ್ಟು ಯಶಸ್ವಿ ಮತ್ತು ಕಮರ್ಷಿಯಲ್ ಚಿತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡ ಶಂಕರನಾಗ್, ಸ್ನೇಹಕ್ಕೆ ಕಟ್ಟುಬಿದ್ದು ಕೆಲವು ಬೇಡದ ಚಿತ್ರಗಳಲ್ಲಿ ನಟಿಸಿದ್ದೂ ಇದೆ. ಆದರೆ ಆ ಕುರಿತು ಅವರಿಗೆ ಎಂದೂ ಪಶ್ಚಾತ್ತಾಪ ಇರಲಿಲ್ಲ. ಶಂಕರನಾಗ್‌ರ ಹೃದಯ ವೈಶಾಲ್ಯತೆ ಬಲ್ಲ ಜನಗಳಿಗೆ ಅದೇನೂ ತಪ್ಪೆನಿಸಲಿಲ್ಲ. ವಿಧಿಗೆ ಬಲಿಯಾಗುವ ಕೊನೆದಿನಗಳಲ್ಲಂತೂ ಶಂಕರನಾಗ್ ತಮ್ಮ ಸಿಬಿಐ ಶಂಕರ್ ಎಸ್.ಪಿ ಸಾಂಗ್ಲಿಯಾನಾ ಇತ್ಯಾದಿ ಸಿನಿಮಾಗಳಿಂದ ಯಶಸ್ಸಿನ ಉತ್ತುಂಗದಲ್ಲೇ ಇದ್ದರು ಎನ್ನಬಹುದು.

ಸಿನಿಮಾದ ಅಭಿನಯಕ್ಕಿಂತ ಹೆಚ್ಚಾಗಿ ಅವರು ತಮ್ಮನ್ನು ತಾವು ಕಂಡುಕೊಂಡಿದ್ದು ಒಬ್ಬ ಅತ್ಯಂತ ಸೃಜನಶೀಲ ತಂತ್ರಜ್ಞನಾಗಿ ಮತ್ತು ರಂಗಕರ್ಮಿಯಾಗಿ…!!!

ಸಿನಿಮಾದ ಅಭಿನಯಕ್ಕಿಂತ ಹೆಚ್ಚಾಗಿ ಅವರು ತಮ್ಮನ್ನು ತಾವು ಕಂಡುಕೊಂಡಿದ್ದು ಒಬ್ಬ ಅತ್ಯಂತ ಸೃಜನಶೀಲ ತಂತ್ರಜ್ಞನಾಗಿ ಮತ್ತು ರಂಗಕರ್ಮಿಯಾಗಿ. ಯಶಸ್ಸಿನ ಉತ್ತುಂಗದಲ್ಲಿದ್ದಾಗಲೂ ಕೂಡ ಶಂಕರನಾಗ್ ರಂಗಭೂಮಿಯ ನಂಟು ಕಳೆದುಕೊಳ್ಳಲಿಲ್ಲ. ‘ನಾಗಮಂಡಲ’ ‘ಜೋಕುಮಾರಸ್ವಾಮಿ’ ಯಂತಹ ನಾಟಕಗಳು ಅವರ ಕನಸಿನಲ್ಲಿ ಮತ್ತು ರಂಗದ ಮೇಲೆ ಕುಣಿಯುತ್ತಲೇ ಇದ್ದವು. ಚಿತ್ರರಂಗವೇ ಒಂದು ಕನಸಿನ ಲೋಕ ಪ್ರತಿಯೊಬ್ಬರೂ ಮಹಾನ್ ಕನಸುಗಾರರು ಎನ್ನುವುದು ಸತ್ಯ.

‘ಶಂಕರನಾಗ್’ ಎಲ್ಲರಿಗಿಂತ ಭಿನ್ನವಾಗುವುದು ಹೇಗೆಂದರೆ ಆತ ಅತ್ಯಂತ ಕ್ರಿಯಾಶೀಲ, ಶಿಸ್ತುಬದ್ಧ ಮತ್ತು ಖಚಿತಯೋಜಿತ ಕನಸುಗಳ ಭಂಡಾರ….!!!!

ಶಂಕರನಾಗ್ ಪ್ರತಿಯೊಂದು ವಿಚಾರದಲ್ಲೂ ಕನಸು ಕಂಡು ನಂತರ ಮರೆತು ಬಿಡುವ ವ್ಯಕ್ತಿ ಆಗಿರಲಿಲ್ಲ. ತಮ್ಮ ಕನಸುಗಳನ್ನು ಸಾಧ್ಯವಾಗಿಸುವುದು ಹೇಗೆ ಎಂದು ಯೋಚಿಸುತ್ತಿದ್ದರು ಮತ್ತು ಬಿಡುವಿದ್ದಾಗೆಲ್ಲಾ ತಮ್ಮ ಕನಸುಗಳಿಗೆ ಕಾವು ಕೊಟ್ಟು ಪೋಷಿಸುತ್ತಿದ್ದರು, ಯೋಜಿಸುತ್ತಿದ್ದರು ಮತ್ತು ಜಾರಿಗೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದರು. ಸಂಕೇತ್ ಸ್ಟುಡಿಯೋ ಹುಟ್ಟು ಹಾಕಿದ್ದು ಕೂಡ ಆ ರೀತಿಯಲ್ಲಿ ಅವರ ಒಂದು ಅದ್ಭುತ ಕೊಡುಗೆ ಎನ್ನಬಹುದು. ಅವರ ಪ್ರಯತ್ನದ ಫಲವಾಗಿಯೇ ಒಂದು ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊAದಿಗೆ ಸಂಕೇತ್ ಸ್ಟುಡಿಯೋ ನೂರಾರು ಚಿತ್ರಗಳಿಗೆ ಧ್ವನಿ ನೀಡುತ್ತಾ ಸಂಗೀತಗಾರರನ್ನು ತಂತ್ರಜ್ಞಾನರನ್ನು ಬೆಳೆಸುವಂತಾಯಿತು. ರಂಗಭೂಮಿಯ ತನ್ನೆಲ್ಲ ಸ್ನೇಹಿತರನ್ನು ಚಿತ್ರರಂಗಕ್ಕೆ ಕರೆದು ತರುತ್ತಿದ್ದ ಶಂಕರನಾಗ್ ಆ ಮೂಲಕ ಅನೇಕ ಸೃಜನಶೀಲ ಕಲಾವಿದರು ಕಲಾವಿದೆಯರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದು ಸ್ತುತ್ಯಾರ್ಹ.


ಸದಾ ಕಮರ್ಷಿಯಲ್ ಸಿನಿಮಾಗಳಲ್ಲಿ ನಟಿಸಿ ಜನರ ಮನರಂಜಿಸಿದ್ದ ಶಂಕರನಾಗ್ ತನ್ನ ಸೃಜನಾತ್ಮಕ ಹಸಿವನ್ನು ನೀಗಿಸಿಕೊಳ್ಳಲು ಆಯ್ದುಕೊಂಡ ಸಿನಿಮಾಗಳನ್ನು ನೋಡಿ. ಅವರ ನಿರ್ದೇಶನದ ಪ್ರತಿ ಚಿತ್ರವೂ ತನ್ನ ವಿಶಿಷ್ಠತೆಯಿಂದಾಗಿ ಇಂದಿಗೂ ಹಸಿರಾಗಿದೆ. ಗೀತಾ,ಮಿಂಚಿನ ಓಟ’, ‘ನೋಡಿ ಸ್ವಾಮಿ ನಾವಿರೋದೇ ಹೀಗೆ’, ‘ಆಕ್ಸಿಡೆಂಟ್’, ‘ಒಂದು ಮುತ್ತಿನ ಕಥೆ’, ಇದೆಲ್ಲವೂ ಕೂಡ ಶಂಕರನಾಗ್ ಹೇಗೆ ಪ್ರತಿ ಚಿತ್ರದಲ್ಲೂ ಹೊಸತನವನ್ನು ಬಯಸುತ್ತಿದ್ದರು ಹುಡುಕುತ್ತಿದ್ದರು ಎಂಬುದಕ್ಕೆ ನಿದರ್ಶನ.

ಯಾವುದೇ ಇಮೇಜುಗಳನ್ನು ಇಟ್ಟುಕೊಳ್ಳದೇ ಬದುಕಿದಾತ..!!!!

ಮಿಂಚಿನ ಓಟ ತನ್ನ ವಸ್ತು ಮತ್ತು ನಿರೂಪಣೆಯಿಂದ ಇನ್ನೂ ಎರಡು ದಶಕ ಬಾಳುತ್ತವೆಯಾದರೆ ಗೀತಾ’ತನ್ನ ಕಥೆ ಮತ್ತು ಹಾಡುಗಳಿಂದ ನೋಡಿ ಸ್ವಾಮಿ ನಾವಿರೋದೇ ಹೀಗೆ’ ತನ್ನ ಹಾಸ್ಯಪ್ರಜ್ಞೆಯಿಂದ. ‘ಆಕ್ಸಿಡೆಂಟ್’, `ಒಂದು ಮುತ್ತಿನ ಕಥೆ’ ತಮ್ಮ ಸಾಮಾಜಿಕ ಕಳಕಳಿಯಿಂದ ಎಂದೆAದಿಗೂ ಭಿನ್ನವಾಗಿ ನಿಲ್ಲುತ್ತವೆ. ಶಂಕರನಾಗ್ ಎಂದಿಗೂ ತಮ್ಮನ್ನು ತಾವು ನಟ ಎಂದಾಗಲೀ, ತಂತ್ರಜ್ಞ ಎಂದಾಗಲೀ, ಕನಸುಗಾರ ಎಂದಾಗಲೀ, ಹೃದಯವಂತ ಎಂದಾಗಲೀ, ತಾರೆ ಎಂದಾಗಲೀ… ಇಲ್ಲ ಇಲ್ಲ.. ಆತ ಎಂದಿಗೂ ಯಾವತ್ತಿಗೂ ಯಾವುದೇ ಇಮೇಜುಗಳನ್ನು ಇಟ್ಟುಕೊಳ್ಳದೇ ಬದುಕಿದಾತ. ತನಗಿಂತ ಕಿರಿಯರು ಕಂಡ ಕೂಡಲೇ ಅವರಾಗಿಯೇ ಅಣ್ಣ ಎನ್ನುವಂತೆ ಇರುತ್ತಿದ್ದ. ತನಗಿಂತ ಹಿರಿಯರಿಗೆ ತಾನಾಗಿಯೇ ಅಣ್ಣ ಎನ್ನುವ ಗೌರವ ಕೊಡುತ್ತಿದ್ದ. ಗೆಳೆಯರೆಲ್ಲರಿಗೂ ಆತ ತೋಳಿಗೆ ತೋಳು ಬೆಸೆಯುವಷ್ಟೇ ಸಹಜವಾಗಿ ಮನಸಿಗೆ ಮನಸು ಬೆಸೆದುಕೊಂಡು ಬಿಡುತ್ತಿದ್ದ ಸ್ನೇಹಜೀವಿ ಅಂಥ ಸ್ನೇಹಜೀವಿ. ಎಂಥದೇ ಸಿಟ್ಟು ಬಂದಿರಲಿ ಒಂದು ಕ್ಷಣ ಕಂಟ್ರೋಲ್ ಮಾಡಿ ಇದ್ದಕ್ಕಿದ್ದಂತೆ ಜೋರಾಗಿ ಗಹಗಹಿಸಿ ನಕ್ಕು ಸಿಟ್ಟು ನುಂಗಿ ಹೋಗಿಬಿಡುತ್ತಿದ್ದ ಆತನ ಸಿಟ್ಟಿನ ಬಗ್ಗೆ ಗೊಣಗಾಟದ ಬಗ್ಗೆ ಇದುವರೆಗೂ ಎಲ್ಲಿಯೂ ಯಾರೂ ಒಂದು ಮಾತಾದರೂ ಆಡಿದ್ದು ಕೇಳಿಯೇ ಇಲ್ಲಾ.

ಶಂಕರನಾಗ್‌ರ ಕಲಾಸೃಷ್ಟಿಯಲ್ಲಿ ಒಂದು ಅಪೂರ್ವರತ್ನ “ಮಾಲ್ಗುಡಿ ಡೇಸ್”..!!!!!

ಇವತ್ತಿಗೂ ಶಂಕರನಾಗ್ ಹೆಸರಲ್ಲಿ ವಾರಕ್ಕೊಂದು ಸಂಘ ಉದ್ಘಾಟನೆಯಾಗುತ್ತಿದೆ ಅಂದರೆ ಅಚ್ಚರಿಯಾಗುತ್ತದೆ. ಬಹುತೇಕ ಹೊಸಾ ಆಟೋಗಳಲ್ಲಿ ಕೂಡಾ ಶಂಕರನಾಗ್ ಚಿತ್ರ ಕಂಡುಬರುತ್ತಲೇ ಇದೆ. ಆಟೋದವರ ಸಂಘಗಳೆಲ್ಲವಕ್ಕೂ ಶಂಕರನಾಗ್ ಹೆಸರೇ ಗಟ್ಟಿಯಾಗಿರುತ್ತದೆ. ಸಾಲದಕ್ಕೆ ರಸ್ತೆಗಳು ಸರ್ಕಲ್‌ಗಳು ಇತ್ಯಾದಿಗಳ ಜೊತೆ ವರುಷಕ್ಕೊಂದಾದರೂ ಶಂಕರನಾಗ್ ಹೆಸರಿನಲ್ಲಿ ಅಥವಾ ಅವರ ನೆನಪಿನಲ್ಲಿ ಚಿತ್ರಗಳು ಬರುತ್ತಲೇ ಇರುತ್ತವೆ ಎಂದರೆ ಆತನ ಜನಪ್ರಿಯತೆಯ ಅಗಾಧತೆಯೇನು ಎನ್ನುವುದನ್ನು ನಾವು ಅಂದಾಜಿಸಬಹುದು. ಶಂಕರನಾಗ್ ಆಟೋ ಚಾಲಕರ ನಡುವ ಅಂತಹ ಅಪಾರ ಜನಪ್ರಿಯತೆಯನ್ನು ಪಡೆದುಕೊಂಡದ್ದು ತಮ್ಮ ಆಟೋ ರಾಜ’ ಚಿತ್ರದ ಮೂಲಕ. ಚಿತ್ರ ಅಪಾರ ಯಶಸ್ಸು ಪಡೆದದ್ದು ಒಂದು ದಾಖಲೆ. ಆಟೋ ಚಾಲಕರ ಆರಾಧ್ಯ ದೈವದಂತೆ ಶಂಕರನಾಗ್ ಅವರೆಲ್ಲರ ಎದೆಯಲ್ಲಿ ಇನ್ನೂ ಅಜರಾಮರರಾಗಿದ್ದಾರೆೆ. ಇದೆಲ್ಲಾ ಸಿನಿಮಾ ಸಾಹಸಗಳ ಕಥೆಯಾದರೆ... ಶಂಕರನಾಗ್ ಸದಾ ಹೇಗೆ ವಿಭಿನ್ನತೆಗಾಗಿ ಹಪಹಪಿಸುತ್ತಿದ್ದರು ಎನ್ನುವುದಕ್ಕೆ ಮತ್ತೊಂದು ಮಹಾನ್ ಉದಾಹರಣೆ.. ದೂರದರ್ಶನಕ್ಕಾಗಿ ಆರ್.ಕೆ. ನಾರಾಯಣ್‌ರಮಾಲ್ಗುಡಿ ಡೇಸ್’ ದಾರಾವಾಹಿಯನ್ನು ನಿರ್ದೇಶಿಸಿದ್ದು. ಚಿತ್ರರಂಗದಲ್ಲಿ ಬಿಡುವಿಲ್ಲದಂತೆ ದುಡಿಯಬಲ್ಲ ಅವಕಾಶಗಳೆಲ್ಲವನ್ನು ಬಿಟ್ಟು ಶಂಕರನಾಗ್ ತಮ್ಮನ್ನು ತಾವು ತಮ್ಮೆದೆಯಲ್ಲಿ ತೀವ್ರವಾಗಿ ತುಡಿಯುತ್ತಿದ್ದ ಆರ್.ಕೆ. ನಾರಾಯಣ್‌ರ ‘ಮಾಲ್ಗುಡಿ ಡೇಸ್’ ಧಾರಾವಾಹಿಯನ್ನು ಹಿಂದಿಯಲ್ಲಿ ನಿರ್ದೇಶಿಸಲು ತೊಡಗಿಕೊಂಡದ್ದು. ಸ್ವಾತಂತ್ರö್ಯಪೂರ್ವ ಕಾಲದ ಮಾಲ್ಗುಡಿ ಎಂಬ ಕಾಲ್ಪನಿಕ ಹಳ್ಳಿಯೊಂದನ್ನು ಸೃಷ್ಟಿಸಲು ಅವರು ಆಯ್ದುಕೊಂಡಿದ್ದು ಕರ್ನಾಟಕದ ಆಗುಂಬೆ. ಇಡಿಯ ಹಳ್ಳಿಯನ್ನೇ ನಂಬಲಾಗದ ರೀತಿಯಲ್ಲಿ ಸ್ವತಂತ್ರö್ಯ ಪೂರ್ವ ಹಳ್ಳಿಯಂತೆ ಸಜ್ಜುಗೊಳಿಸಿದ್ದರು. ಹೌದು ಅದರಲ್ಲಿ ಅರುಂಧತಿನಾಗ್ ಸೇರಿದಂತೆ ಇನ್ನೂ ಅನೇಕ ಕ್ರಿಯಾಶೀಲರು ಕೈ ಜೋಡಿಸಿದ್ದರು ಎನ್ನುವುದು ಸತ್ಯವೇ ಆದರೂ, ಅಂತಹುದೊAದು ತಂಡವನ್ನು ಕಟ್ಟಿಕೊಂಡು ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯುವ ಶಕ್ತಿ ಶಂಕರ್‌ನಾಗ್‌ರಿಗೆ ಇದ್ದದ್ದು ಅಭಿನಂದನಾರ್ಹ. ಪ್ರತಿ ಪಾತ್ರ, ಪ್ರತಿ ದೃಶ್ಯ, ಪ್ರತಿ ಸಣ್ಣ ವಿವರವನ್ನೂ ಬಿಡದಂತೆ ತನ್ನ ತಂಡದೊAದಿಗೆ ಶ್ರಮಿಸುತ್ತಾ ಶಂಕರನಾಗ್ ನೀಡಿದ ಮಹಾನ್ ಕೊಡುಗೆ ‘ಮಾಲ್ಗುಡಿ ಡೇಸ್’. ಆ ಧಾರಾವಾಹಿ ನಿರ್ಮಿತವಾಗಿ ಸುಮಾರು ೩೦ ವರ್ಷಗಳು ಕಳೆದ ನಂತರವೂ ಕೂಡ ಈಗಲೂ ಮಾಲ್ಗುಡಿ ಡೇಸ್ ಜಗತ್ತಿನ ಯಾವುದಾದೋ ಮೂಲೆಯಲ್ಲಿ ಯಾವುದಾದರೊಂದು ಚಾನಲ್‌ನಲ್ಲಿ ಆಯಾ ಭಾಷೆಗೆ ಡಬ್ ಆಗಿ ಬರುತ್ತಲೇ ಇರುತ್ತದೆ ಎನ್ನುವುದೇ ಇದರ ಹೆಗ್ಗಳಿಕೆ. ಶಂಕರನಾಗ್‌ರ ಕಲಾಸೃಷ್ಟಿಯಲ್ಲಿ ಒಂದು ಅಪೂರ್ವರತ್ನ ಮಾಲ್ಗುಡಿ ಡೇಸ್. ಬಹುಶಃ ಅಭಿನಯದಿಂದ ಮಹಾತಾರೆಯಾಗದಿದ್ದರೂ ತನ್ನ ಈ ಕ್ರಿಯಾಶೀಲ ಸೃಷ್ಟಿಯಿಂದ ಎಂದು ಖಚಿತ ಧ್ವನಿಯಲ್ಲಿ ಹೇಳಬಹುದು.

ಈಗಲೂ ಕೂಡಾ ಚಿತ್ರರಂಗದ ಮತ್ತು ಬಹುತೇಕ ಜನಸಾಮಾನ್ಯರ ಅಭಿಪ್ರಾಯ ಒಂದೇ.. “ಶಂಕರ್‌ನಾಗ್” ಇರಬೇಕಿತ್ತು…!

ಈಗಲೂ ಕೂಡಾ ಚಿತ್ರರಂಗದ ಮತ್ತು ಬಹುತೇಕ ಜನಸಾಮಾನ್ಯರ ಅಭಿಪ್ರಾಯ ಒಂದೇ.. “ಶಂಕರ್‌ನಾಗ್ ಇರಬೇಕಿತ್ತು. ಆತ ಇದ್ದಿದ್ದರೆ ಚಿತ್ರರಂಗ ಹೀಗೆ ಇರುತ್ತಿರಲಿಲ್ಲಾ. ಆತ ಏನಾದರೂ ಮಾಡಿಯೇ ಮಾಡಿರುತ್ತಿದ್ದ. ಏನು ಮಾಡಬೇಕು ಎಂದು ಅಚ್ಚುಕಟ್ಟಾಗಿ ಯೋಚಿಸಿ ಎಲ್ಲವನ್ನೂ ಸರಿ ಮಾಡಬಲ್ಲ ಶಕ್ತಿ ಇದ್ದಿದ್ದು ಅವನೊಬ್ಬನಿಗೆ ಮಾತ್ರಾ. ಆತ ಇರಬೇಕಿತ್ತು. ಆಗ ಖಂಡಿತವಾಗಿ ಚಿತ್ರರಂಗ ಹೀಗೆ ಇರುತ್ತಿರಲಿಲ್ಲಾ.” ಎಂದು ಪದೇ ಪದೇ ಹೇಳಿ ಲೊಚಗುಟ್ಟುತ್ತಾರೆ. ಇದು ಶಂಕರ್ ಘನತೆಗೆ ಹಿಡಿದ ಕನ್ನಡಿಯೋ ಅಥವಾ ಉತ್ಪೆçÃಕ್ಷೆಯೋ ಗೊತ್ತಿಲ್ಲಾ. ಆದರೆ.. ಒಟ್ಟಾರೆಯಾಗಿ ಇಂಥದ್ದೇ ಎಂದು ಒಂದು ಖಚಿತೋಚಿತ ಕಾರಣಕ್ಕೆ ಹೇಳಲಾಗದೇ ಇದ್ದರೂ ಸೃಜನಶೀಲತೆಯ ಮಾನದಂಡದಲ್ಲಿ ನಾನಾ ವಿಭಾಗಗಳ ಮೂಲಕ ಪರಾಮರ್ಶಿಸಿ ನೋಡಿದರೆ ಶಂಕರನಾಗ್ ಸಾರ್ವಕಾಲಿಕ ಸರ್ವಶ್ರೇಷ್ಠ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿ ವಿರಾಜಿಸಿದ್ದಾರೆ ಎಂಬುದು ಹೆಮ್ಮೆಪಡತಕ್ಕ ಸಂಗತಿಯೆನಿಸುತ್ತದೆ.

ಕೃಪೆ : ನಮ್ಮ ಸೂಪರ್ ಸ್ಟಾರ್ಸ್ ಪತ್ರಿಕೆಯಲ್ಲಿ ಖ್ಯಾತ ಬರಹಗಾರ, ಮಳವಳ್ಳಿ ಪ್ರಸನ್ನ ರವರು ಬರೆದ ಅಂಕಣ

Leave a Comment