ಡಾ.ರಾಜ್‌ಕುಮಾರ್ ನಂತಹ ಮತ್ತೊಬ್ಬ ನಟ ಮತ್ತೆ ಹುಟ್ಟಲು ಸಾಧ್ಯವೇ….?

Share

ಡಾ.ರಾಜ್‌ಕುಮಾರ್ ಒಬ್ಬ ಅಕ್ಷರಶಃ ‘ದೇವತಾ ಮನುಷ್ಯ’. ಸಿನಿಮಾ ಅಷ್ಟೇ ಅಲ್ಲ ವೈಯಕ್ತಿಕ ಬದುಕಿನಲ್ಲೂ ಆದರ್ಶ ವ್ಯಕ್ತಿ. ಅವರ ಚಿತ್ರಗಳಲ್ಲಿ ಅದೆಂಥ ಪ್ರೀತಿ..? ಅದೆಂಥ ಅದ್ಭುತ ನಟನೆ..? ಅವರು ಹೆಂಡತಿಯನ್ನು ಪ್ರೀತಿಸಿದ ಹಾಗೆ, ಗೌರವಿಸಿದ ಹಾಗೆ ಯಾರಾದರೊಬ್ಬ ಪುರುಷ ಪ್ರೀತಿಸಲು ಸಾಧ್ಯವಾ..? ಇದ್ದರೆ ಅಂಥ ಗಂಡ ಇರಬೇಕಪ್ಪ, ಹೆಂಡತಿಗೆ ಸ್ವಲ್ಪವೂ ಕಷ್ಟ ಕೊಡದಂತ ಆ ಪಾತ್ರಗಳು, ಎಷ್ಟು ಕಷ್ಟ ಪಡ್ತಿಯೇ ನೀನು? ಎಂಥಹಾ ಒಳ್ಳೆ ಮನಸೇ ನಿಂದು..? ಅಷ್ಟೇ ಅಲ್ಲ ಅಪ್ಪ, ಅಮ್ಮ, ಅತ್ತೆ, ಮಾವ, ಇಡೀ ಕುಟುಂಬವನ್ನು ಪ್ರೀತಿಸುತ್ತಾ, ಅದಕ್ಕಾಗಿ ಎಂಥಾ ತ್ಯಾಗವನ್ನು ಬೇಕಾದರೂ ಮಾಡುವ ಪಾತ್ರಗಳು ಆ ಕಾಲಕ್ಕೆ ಅದೆಷ್ಟು ಜನರÀ ಮೇಲೆ ಪ್ರಭಾವ ಬೀರಿತ್ತೆಂದರೆ ಒಡೆದು ಹೋಗಬೇಕಿದ್ದ ಸಾಕಷ್ಟು ಕುಟುಂಬಗಳು ಇವರ ಸಿನಿಮಾಗಳ ಪ್ರಭಾವದಿಂದಲೇ ಒಂದುಗೂಡಿದ್ದೂ ಉಂಟು. ಇವೆಲ್ಲಾ ‘ಒಡಹುಟ್ಟಿದವರು’ ಹಾಗೂ ‘ಬಂಗಾರದ ಮನುಷ್ಯ’ ಚಿತ್ರಗಳಲ್ಲಿ ಅನಾವರಣಗೊಂಡಿದೆ.

ಡಾ.ರಾಜ್‌ಕುಮಾರ್ ನಟಿಸಿದಂಥ ಚಿತ್ರಗಳನ್ನು ಒಮ್ಮೆ ಮಂಥನಕ್ಕೆ ಒಳಪಡಿಸಿದರೆ ಅವೆಲ್ಲವೂ ಮಹಿಳಾ ಪಾತ್ರಗಳಿಗೆ ಘನತೆ, ಗೌರವವನ್ನು ತಂದು ಕೊಟ್ಟಂಥವುಗಳಾಗಿದ್ದವು..!!!!

ಸಮಾಜದಲ್ಲಿ ಹೆಣ್ಣಿನ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಇದಕ್ಕೆ ಕಾರಣ ಕೇಳಿದರೆ ಎಲ್ಲರೂ ಬೆಟ್ಟು ತೋರಿಸುವುದು ಇಂದಿನ ಚಲನಚಿತ್ರಗಳು ಹಾಗೂ ದೃಶ್ಯ ಮಾಧ್ಯಮವನ್ನು. ಇಂಥ ಸಂದರ್ಭದಲ್ಲಿ ರಾಜ್‌ಕುಮಾರ್ ನಟಿಸಿದಂಥ ಚಿತ್ರಗಳನ್ನು ಒಮ್ಮೆ ಮಂಥನಕ್ಕೆ ಒಳಪಡಿಸಿದರೆ ಅವೆಲ್ಲವೂ ಮಹಿಳಾ ಪಾತ್ರಗಳಿಗೆ ಘನತೆ, ಗೌರವ ತಂದುಕೊಟ್ಟಂಥವುಗಳಾಗಿದ್ದವು ಎಂಬುದನ್ನು ನನೆಪಿಸಿಕೊಳ್ಳಲೇಬೇಕಾದ ಸಂಗತಿ.

ಅಭಿಮಾನಿ ದೇವರುಗಳ ಆರಾಧ್ಯ ದೈವ ಡಾ.ರಾಜ್. ಕಳ್ಳನಾದರೂ ಹೆಣ್ಣನ್ನು ಗೌರವಿಸುವ ಪಾತ್ರ ಡಾ.ರಾಜ್ ರದ್ದು. ಹೇಗೆ ಮದ್ಯಪಾನ ಮಾಡದ, ಸಿಗರೇಟು ಸೇದದ, ಜೂಜು ಆಡದ ಒಂದು ಆದರ್ಶವನ್ನು ತಮ್ಮ ಚಿತ್ರಗಳಲ್ಲಿ ಪಾಲಿಸುತ್ತ ಬಂದರೋ ಹಾಗೆ ನಾನೊಬ್ಬ ಕಳ್ಳ, ದಾರಿ ತಪ್ಪಿದ ಮಗ ಚಿತ್ರಗಳಲ್ಲಿ ಕಳ್ಳನ ಪಾತ್ರಮಾಡಿದರೂ ಅಲ್ಲಿ ಕೂಡ ಹೆಣ್ಣನ್ನು ಗೌರವಿಸುವಂತಹ ಪಾತ್ರಗಳನ್ನೇ ಮಾಡಿದರು. ಇವೆಲ್ಲಾ ಕಾರಣಗಳಿಂದಲೇ ರಾಜಣ್ಣ ನಮ್ಮೆಲ್ಲರಿಗೂ ‘ಅಚ್ಚುಮೆಚು’್ಚ, ಅದಕ್ಕಾಗಿಯೇ ಅವರನ್ನು ಪೂಜಿಸುತ್ತೇವೆ, ಅನುಸರಿಸುತ್ತೇವೆ, ಎಂದು ಮೇರು ನಟ ವಿಷ್ಣುವರ್ಧನ್ ಸಂದರ್ಶನವೊಂದರಲ್ಲಿ ಕನ್ನಡ ಚಿತ್ರರಂಗವನ್ನು ತಮ್ಮ ರಾಜಮಾರ್ಗದಿಂದ ದೀರ್ಘಕಾಲ ಮುನ್ನಡೆಸಿದ ಡಾ.ರಾಜ್ ಬಗ್ಗೆ ಹೇಳಿದ್ದಾರೆ.

ಡಾ.ರಾಜ್‌ರ ಸಿನಿಮಾ ಹೊರತಾದ ಸಾಮಾಜಿಕ ಕಳಕಳಿ..!!!!

ಡಾ.ರಾಜ್‌ಕುಮಾರ್ ಸಿನಿಮಾ ಹೊರತಾಗಿ ಸಾಮಾಜಿಕ ಕಳಕಳಿ ಹೊಂದಿದ್ದರು. ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಿದ್ದರು. ಚಿತ್ರರಂಗದಲ್ಲಿ ಯಾರೇ ಮೃತಪಟ್ಟರು ಸಹ ಅವರ ಮನೆಗೆ ಹೋಗಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ಬರುತ್ತಿದ್ದರು. ಸಂಘ, ಸಂಸ್ಥೆಗಳು, ಅನಾಥಶ್ರಮಗಳಿಗೆ ನೆರವು ನೀಡುತ್ತಿದ್ದರು. ಬಲಗೈಯಲ್ಲಿ ಕೊಟ್ಟದ್ದು ಎಡಗೈಗೆ ಗೊತ್ತಾಗಬಾರದು ಆ ರೀತಿ ಸಹಾಯ ಮಾಡುತ್ತಿದ್ದರು. ಇಷ್ಟೇ ಅಲ್ಲ ಕನ್ನಡ ನಾಡು, ನುಡಿ, ಸಂಸ್ಕೃತಿ ಬಗ್ಗೆ ಅಣ್ಣಾವ್ರಿಗೆ ಅಪಾರವಾದ ಗೌರವವಿತ್ತು. ಗಡಿ, ಭಾಷೆಗೆ ಆಪತ್ತು ಬಂದರೆ ಅವರು ಸದಾ ಮುಂದಿರುತ್ತಿದ್ದರು. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಗೋಕಾಕ್ ಚಳವಳಿ. ಅದು ೧೯೮೨ರ ಸಮಯ. ರಾಜ್ಯದಲ್ಲಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕನ್ನಡ, ಇಂಗ್ಲೀಷ್, ತಮಿಳು, ತೆಲುಗು, ಮರಾಠಿ ಮುಂತಾದ ವಿಷಯಗಳನ್ನು ಪ್ರಥಮ ಭಾಷೆಯಾಗಿ ತೆಗೆದುಕೊಳ್ಳಬಹುದಾಗಿತ್ತು. ಹೀಗಾಗಿ ಬಹುತೇಕ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯನ್ನು ಪ್ರಥಮ ಭಾಷೆಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಇದು ಕನ್ನಡ ಭಾಷೆಗೆ ಭಾರೀ ಹೊಡೆತ ಕೊಟ್ಟಿತ್ತು. ಹೀಗಾಗಿ ಸಂಸ್ಕೃತವನ್ನು ಪ್ರಥಮ ಭಾಷೆಯ ಸ್ಥಾನದಿಂದ ತೆಗೆಯಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಯಿತು. ಕರ್ನಾಟಕದಲ್ಲಿ ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕೆಂದು ಸಾಹಿತಿಗಳು ಬೀದಿಗಿಳಿದಿದ್ದರು. ಈ ಹೋರಾಟಕ್ಕೆ ಡಾ.ರಾಜ್ ಎಂಬ ಶಕ್ತಿ ಕೈಜೋಡಿಸಿ, ರಾಜ್ಯದಲ್ಲಿ ಬಹುದೊಡ್ಡ ಕನ್ನಡ ಹೋರಾಟ ನಡೆಯಿತು. ಡಾ.ರಾಜ್ ಹೋರಾಟಕ್ಕೆ ಧುಮಿಕಿದ್ದಾರೆ ಅಂತ ಗೊತ್ತಾಗುತ್ತಿದ್ದಂತೆ ಲಕ್ಷಾಂತರ ಮಂದಿ ಬೀದಿಗಳಿದು ಅಣ್ಣಾವ್ರು ಹಾಗೂ ಕನ್ನಡದ ಪರವಾಗಿ ಘೋಷಣೆಗಳನ್ನು ಕೂಗಿದ್ರು. ಪ್ರತಿಭಟನೆ ಕಾವು ಏರಿಸಿ ರಾಜ್, ಅನಿವಾರ್ಯವಾಗಿ ಮದ್ರಾಸಿನಲ್ಲಿ ಚಿತ್ರೀಕರಣಕ್ಕೆ ತೆರಳಿದ್ರು. ಆದ್ರೂ ಸಹ ಅಲ್ಲಿಂದಲೇ ಗೋಕಾಕ್ ಹೋರಾಟಗಾರರಿಗೆ ಪತ್ರ ಬರೆದಿದ್ದರು. ನಾಡು-ನುಡಿ ವಿಚಾರಕ್ಕೆ ಕುತ್ತು ಬಂದರೇ, ನಾವು ಸಹಿಸಲ್ಲ ಅಂತ ದನಿ ಎತ್ತಿದ್ದರು. ಅದೊಂದು ಪತ್ರ ಸಾಕಾಗಿತ್ತು. ಗೋಕಾಕ್ ಹೋರಾಟಗಾರರಿಗೆ ಗುರಿಯನ್ನು ಮುಟ್ಟಲು.

ರಾಜ್ ಬರೆದ ಪತ್ರದಲ್ಲಿ ಏನಿತ್ತು..?

ನನ್ನ ಹುಟ್ಟಿದ ನಾಡು ಕರ್ನಾಟಕ, ನನ್ನ ತಾಯ್ನುಡಿ ಕನ್ನಡ. ಈ ಎರಡೂ ನನ್ನ ರಕ್ತದ ಭಾಗವಾಗಿದೆ. ನನ್ನ ಬದುಕನ್ನೇ ಅವುಗಳಿಗಾಗಿ ಮೀಸಲಿಟ್ಟು, ಕಿಂಚಿತ್ ಕಲಾಸೇವೆಯನ್ನ ಮಾಡುತ್ತಿದ್ದೇನೆ. ಈಗ ಕರ್ನಾಟದಲ್ಲೇ ಕನ್ನಡಕ್ಕೆ, ಕನ್ನಡಿಗರಿಗೆ ಕುತ್ತು ಬಂದಿರುವುದು ತುಂಬಾ ವಿಷಾದಕರ. ಗೋಕಾಕ್ ವರದಿ ಜಾರಿಯಾಗಬೇಕು. ಎಲ್ಲಾ ರೀತಿಯಲ್ಲೂ ಸಮರ್ಪಕವಾಗಿದ್ದ ಗೋಕಾಕ್ ನೀತಿಯನ್ನು ಕಡೆಗಣಿಸಿ, ಸರ್ಕಾರವೂ ತನ್ನದೇ ಆದ ಸೂತ್ರವನ್ನು ಮುಂದಿಟ್ಟಿರುವುದು ನನಗೆ, ನನ್ನಂತಹ ಕಲಾವಿದರಿಗೆ, ಸಾಹಿತಿಗಳಿಗೆ ಹಾಗೂ ಕನ್ನಡ ಕುಲಕೊಟಿಗೆ ತೀವ್ರ ಅಸಮಾಧಾನವನ್ನು ಉಂಟುಮಾಡಿದೆ. ಏನೇ ಆದ್ರೂ ಗೋಕಾಕ್ ಆಯೋಗದ ಶಿಫಾರಸ್ಸನ್ನೇ ಜಾರಿಗೆ ತರಬೇಕೆಂದು ಸರ್ಕಾರವನ್ನು ಒತ್ತಾಯಪಡಿಸಿ. ನಿಮ್ಮ ಶಾಂತಿಯುತವಾದ ಚಳವಳಿಗೆ ನನ್ನ ಅಖಂಡ ಬೆಂಬಲವಿದೆ. ಈ ಕಾರಣದಿಂದ ಕರ್ನಾಟಕದಿಂದ ಅಂದರೇ, ನನ್ನ ತಾಯ್ನಾಡು ಮತ್ತು ತಾಯ್ನುಡಿಯಿಂದ ಯಾವುದೇ ಕರೆ ಬಂದರೂ ಈವತ್ತಿನ ನನ್ನ ಎಲ್ಲ ಶಕ್ತಿಯನ್ನ ನನ್ನ ತಾಯಿಗಾಗಿ ಮುಡಿಪಾಗಿಡಲು ಸಿದ್ದವಾಗಿದ್ದೀನಿ.

ರಾಜ್‌ಗೆ ಡಾಕ್ಟರೇಟ್…!!!!

ಆಡು ಮುಟ್ಟದ ಸೊಪ್ಪಿಲ್ಲ, ರಾಜ್‌ಕುಮಾರ್ ನಿರ್ವಹಿಸದ ಪಾತ್ರಗಳಿಲ್ಲ. ಭಾರತೀಯ ಚಿತ್ರರಂಗದಲ್ಲಿ ಒಬ್ಬ ನಟ ಇಷ್ಟು ವೈವಿಧ್ಯಮಯ ಪಾತ್ರಗಳನ್ನು ನಿರ್ವಹಿಸಿದ್ದು, ಆ ಮೂಲಕ ಜನಪ್ರಿಯತೆಯ ಉತ್ತುಂಗವನ್ನು ಏರಿದ್ದು, ಹಾಗೆ ಮಾಡಿದ ಎಲ್ಲಾ ಪಾತ್ರಗಳಲ್ಲೂ ಅಭಿವ್ಯಕ್ತಿಯ ಶ್ರೇಷ್ಠತೆಯನ್ನು ದಾಖಲಿಸಿದ್ದು ಇನ್ನೊಂದು ಉದಾಹರಣೆ ಇಲ್ಲ. ಇನ್ನು ತಮಗೆ ಡಾಕ್ಟರೇಟ್ ಸಿಕ್ಕಿದರ ಬಗ್ಗೆ ಮಾತನಾಡಿದ್ದ ರಾಜ್, ‘ನಾಲ್ಕನೇ ಕ್ಲಾಸ್ ಓದಿದ ಈ ಗಮಾರನಿಗೆ, ಎಮ್ಮೆ ಮೇಯಿಸಿಕೊಂಡು ಬೆಳೆದ ಈ ಅಜ್ಞಾನಿಗೆ ಮೈಸೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಕೊಟ್ಟಿದೆ ಅಂದ್ರೆ ಅದು ಅವರ ದೊಡ್ಡತನ. ಇದನ್ನು ನಾನು ಹೇಗೆ ಸ್ವೀಕರಿಸಿಕೊಳ್ಳಲಿ ದಕ್ಕಿಸಿಕೊಳ್ಳಲಿ’ ಅಂತ ಉದ್ಗರಿಸಿದ್ದರು. ಅವರ ಸರಳತೆಯ ಮುಂದೆ, ಹಣ, ಐಶ್ವರ್ಯ, ಅಂತಸ್ತು, ಜನಾಭಿಮಾನ, ಹೆಸರು ಯಾವುದೂ ಕನ್ನಡದ ಕುಲತಿಲಕನನ್ನು ಎಂದೂ ವಿಚಲಿತಗೊಳಿಸಿದ್ದಿಲ್ಲ. ಕಾಲಧರ್ಮವನ್ನೂ ಮೀರಿ ತನ್ನ ವ್ಯಕ್ತಿತ್ವ, ಬುದ್ಧಿ, ಭಾವ ಮತ್ತು ಪ್ರಜ್ಞೆಯನ್ನು ಬೆಳಸಿಕೊಂಡವರು ಡಾ.ರಾಜ್.. ವರನಟರ ಕುರಿತು ಇಷ್ಟೆಲ್ಲವನ್ನು ಏಕೆ ಹೇಳಿದ್ದು ಎಂದರೆ? ಈ ನಾಡು, ನುಡಿ ಮತ್ತು ಸಂಸ್ಕೃತಿಯ ಅನಭಿಷಕ್ತ ನಿಧಿಯೊಂದು ಕಳಚಿಕೊಂಡು ಹದಿನಾಲ್ಕು ವರ್ಷಗಳೇ ಕಳೆದಿವೆ. ನಿಜವಾದ ಅರ್ಥದಲ್ಲಿ ನಾಡು ಸಾಂಸ್ಕೃತಿಕ ಅಧೈರ್ಯವಿಲ್ಲದೆ ಅನಾಥವಾಗಿದೆ. ಈ ಹೊತ್ತಲ್ಲಿ ಅವರ ಚಿತ್ರಗಳ ಅಂಕಿಸಂಖ್ಯೆ, ಪಾತ್ರ, ಚಿತ್ರ, ಊರು ಕೇರಿಗಳ ವ್ಯಾವಹಾರಿಕ ವಿವರಣೆಗಿಂತ ಅವರ ಭಾವ-ಬದುಕು, ಅಭಿರುಚಿ, ವ್ಯಕ್ತಿತ್ವದ ಚಿಂತನೆ ಮುಖ್ಯ. ಡಾ.ರಾಜಕುಮಾರ್ ಅವರಂಥ ನಟ ಒಮ್ಮೆ ಹುಟ್ಟಿಬರಬಹುದು, ಆದರೆ ಅವರಂಥ ನಟ ಹಾಗೂ ವ್ಯಕ್ತಿ ಇನ್ನೆಂದೂ ಹುಟ್ಟಲಾರ. ಮರಳಿ ಬನ್ನಿ ರಾಜಣ್ಣ ಪರಿತಪಿಸುತ್ತಿದ್ದಾರೆ ಅಭಿಮಾನಿ ದೇವರುಗಳು.

Leave a Comment