ಸ್ನಿಗ್ಧ ಚೆಲುವೆ, ಕನ್ನಡದ ನಟಿ ನಿವೇದಿತಾ ಜೈನ್ ಳ ನಿಗೂಢ ಸಾವಿನ ರಹಸ್ಯ ..!

Share

ಸುಂದರವಾದ ಯುವತಿಯ ನೀಳ ದೇಹ ತಲೆಕೆಳಗಾಗಿ ಧೊಪ್ಪೆಂದು ಕೆಳಕ್ಕೆ ಬಿದ್ದಿತ್ತು….!

ಅದು 1998 ರ ಇಸವಿಯ ಮೇ ತಿಂಗಳು.. ಆ ದಿನಗಳಲ್ಲಿ ಬೆಂಗಳೂರು ಈಗಿನಂತೆ ಗಿಜಿಗುಡುತ್ತಿರಲಿಲ್ಲ‌‌ .. ಅನೇಕ ಏರಿಯಾಗಳು ನಿರ್ಜನ ಹಾಗು ಸ್ತಬ್ಧವಾಗಿದ್ದವು.. ಅಂತೆಯೇ ಬೆಂಗಳೂರು ಉತ್ತರದಲ್ಲಿ ಬರುವ ರಾಜ ರಾಜೇಶ್ವರಿ ನಗರವೂ ಅಂತಹ ಒಂದು ನಿರ್ಜನ ಪ್ರದೇಶ.. ಎಲ್ಲೊ ಅಲ್ಲೊಂದು ಇಲ್ಲೊಂದು ಮನೆಗಳು ಕಾಣುತ್ತಿದ್ದವು. ಹೀಗಿರುವಾಗ ಆ ವರ್ಷದ ಮೇ ತಿಂಗಳಿನ 17 ನೆ ತಾರೀಕಿನಂದು ರಾಜರಾಜೇಶ್ವರಿನಗರದಲ್ಲಿನ ಅಂತಹ ಒಂದು ಭವ್ಯ‌ ಮನೆಯ ಮೂರನೆ ಮಹಡಿಯಿಂದ ಒಂದು ಸುಂದರವಾದ ಯುವತಿಯ ನೀಳ ದೇಹ ತಲೆಕೆಳಗಾಗಿ ಧೊಪ್ಪೆಂದು ಕೆಳಕ್ಕೆ ಬಿದ್ದಿತ್ತು. ತಲೆ ಹಾಗೂ ಕೈ ಕಾಲುಗಳ ಫ್ರಾಕ್ಚರ್ ಸಂಭವಿಸಿ ತೀರಾ ಗಂಭೀರ ಸ್ಥಿತಿ ತಲುಪಿದ್ದ ಆ ದೇಹವನ್ನ ತಕ್ಷಣವೇ ಮಲ್ಯ ಆಸ್ಪತ್ರೆಗೆ ಸಾಗಿಸಲಾಯ್ತು.. ಅಲ್ಲಿಂದ ಮುಂದಿನ‌ 24 ದಿನಗಳವರೆಗೆ ಕೋಮಾ ಸ್ಥಿತಿಯಲ್ಲಿದ್ದ ಯುವತಿಯ ದೇಹ ಜೂನ್ ಹತ್ತನೆ ತಾರೀಕು ಇಹಲೋಕ ತ್ಯಜಿಸಿತ್ತು. ಹೀಗೆ ಅಕಾಲವಾಗಿ ನಮ್ಮನ್ನಗಲಿದ ಆ ಯುವತಿಯ ಹೆಸರೆ ನಿವೇದಿತಾ ಜೈನ್…. ! 

ಆಕೆ ಸತ್ತಾಗ ಆಕೆಗಿನ್ನು ಹದಿನೆಂಟರ ಪ್ರಾಯ…!

ನಿವೇದಿತಾ ಜೈನ್ ! ಆಕೆ ಸತ್ತಾಗ ಆಕೆಗಿನ್ನು ಹದಿನೆಂಟರ ಪ್ರಾಯ. ನಿವೇದಿತಾ ಮೂಲತಃ ಬೆಂಗಳೂರಿನವರೆ.. ಜನಿಸಿದ್ದು 1979 ರ ಜೂನ್ 9 ರಂದು.. ಈಕೆಯ ತಂದೆ ಕ್ಯಾಪ್ಟನ್ ಆಗಿದ್ದ ರಾಜೇಂದ್ರ ಜೈನ್ ಹಾಗು ತಾಯಿ ಗೌರಿ ಪ್ರಿಯ. ನಿವೇದಿತಾ ಚಿಕ್ಕಂದಿನಿಂದಲೇ ಚುರುಕು ಸ್ವಭಾವದ, ಚಾರ್ಮಿಂಗ್ ವ್ಯಕ್ತಿತ್ವವುಳ್ಳ ಸ್ಫುರದ್ರೂಪಿ ಹುಡುಗಿ.. ಈಕೆ ಮಾಡೆಲಿಂಗ್ ನಲ್ಲಿ ಉತ್ಸಾಹಿತಳಾಗಿದ್ದಳು.. 1994 ರಲ್ಲಿ ನಡೆದ ಮಿಸ್ ಬೆಂಗಳೂರು ಸ್ಪರ್ಧೆಯಲ್ಲಿ ಪ್ರಥಮ ಸ್ಥಾನದಲ್ಲಿ ಆಯ್ಕೆಯಾಗಿ ಮಿಸ್ ಬೆಂಗಳೂರು ಟೈಟಲ್ ಗೆದ್ದಾಗ ಈಕೆಯ ವಯಸ್ಸು ಇನ್ನು ಹದಿನೈದೆ ವರ್ಷ !

ಇಂಥ ಅಪೂರ್ವ ಸುಂದರಿಯನ್ನ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಹಾಗು ಹೆಗ್ಗಳಿಕೆ ಡಾ ರಾಜ್‌ಕುಮಾರ್ ಪ್ರೊಡಕ್ಷನ್ ದು…!!!!

1996 ರಲ್ಲಿ ಈಕೆ ಕನ್ನಡ ಚಿತ್ರರಂಗಕ್ಕು ಕಾಲಿಟ್ಟರು.. ಇಂಥ ಅಪೂರ್ವ ಸುಂದರಿಯನ್ನ ಚಿತ್ರರಂಗಕ್ಕೆ ಪರಿಚಯಿಸಿದ ಕೀರ್ತಿ ಹಾಗು ಹೆಗ್ಗಳಿಕೆ ಡಾ ರಾಜ್‌ಕುಮಾರ್ ಪ್ರೊಡಕ್ಷನ್ ದು, ಮುಂದೆ ಈ ನಟಿಗೆ ಸಿಕ್ಕ ಯಶಸ್ಸಿಗೆ ಇಡೀ ಚಿತ್ರರಂಗವೆ ರಾಜ್‌ಕುಮಾರ್ ಕುಟುಂಬವನ್ನ ಶ್ಲಾಘಿಸಿದ್ದ ಕಾಲವದು.

ಸೂಪರ್ ಸ್ಟಾರ್ ನಟರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್, ಶಶಿ‌ಕುಮಾರ್, ಅಂಬರೀಷ್ ಹಾಗೂ ರಮೇಶ್ ಮುಂತಾದ ಕಲಾವಿದರೊಂದಿಗೆ ನಟಿಸಿದ ನಿವೇದಿತಾ ಜೈನ್ ಶೀಘ್ರವಾಗಿ ಕನ್ನಡದ ಬಹು ಬೇಡಿಕೆಯ ನಟಿಯಾಗಿ ಹೋದರು ..!

1996 ರ ಸಾಲಿನ ಕನ್ನಡದ ಯಶಸ್ವಿ ಹಾಗು ಸಮಕಾಲೀನ ನಟಿಯರಾಗಿದ್ದ ಸೌಂದರ್ಯ, ಪ್ರೇಮ, ಸುಧಾರಾಣಿ, ಮಾಲಾಶ್ರೀ ಮುಂತಾದ ಕಲಾವಿದೆಯರೊಂದಿಗೆ ಇನ್ನು ಸಣ್ಣ ವಯಸ್ಸಿನ ನಿವೇದಿತಾ ಜೈನ್ ಸಹ ಗುರುತಿಸಿಕೊಂಡಿದ್ದರು. ಇಷ್ಟು ಸಣ್ಣ ವಯಸ್ಸಿಗೆ ಈಕೆ ಸಾಧಿಸಿದ್ದ ಈ ಯಶಸ್ಸು, ಕೀರ್ತಿಯ ಬಗ್ಗೆ ಚಿತ್ರರಂಗ ಹಾಗು ಮಾಧ್ಯಮಗಳು ಹೆಮ್ಮೆ ಪಟ್ಟವು.‌. ಅನೇಕ ಪತ್ರಿಕೆಗಳ ಹೆಡ್ ಲೈನ್ಸ್ ನಲ್ಲಿ ನಿವೇದಿತಾರ ಹೆಸರು ರಾರಾಜಿಸಿತು.

ಇಂಥ ನಟಿಯ ಧಿಡೀರ್ ಸಾವು ಆವತ್ತಿಗೆ ಇಡೀ ಚಿತ್ರರಂಗವನ್ನ ನಡುಗಿಸಿತ್ತು ! ಅಸಂಖ್ಯಾತ ಅಭಿಮಾನಿಗಳು ಆವತ್ತು ನಿವೇದಿತಾರನ್ನ ಕಾಣಲು ಆಕೆಯ ಮನೆ ಮುಂದೆ ಹಾಗು ಮಲ್ಯ ಆಸ್ಪತ್ರೆಯ ಮುಂದೆ ಜಮಾವಣೆಯಾಗಿದ್ದರು

ಆಕೆಯ ಸಾವು ಸಂಭವಿಸಿದ್ದು ಹೇಗೆ ? 

ಆ ದಿನ ನಡೆದ ದುರಂತವಾದರೂ ಏನು ?

1996 ರ ಬಳಿಕ 1997 ರ ಹೊತ್ತಿಗೆ ನಿವೇದಿತಾ ನಟಿಸಿದ ಒಂದಷ್ಟು ಚಿತ್ರಗಳು ಏಕೊ ಅಷ್ಟಾಗಿ ಯಶಸ್ಸು ಕಾಣಲಿಲ್ಲ‌.. 1998 ರವರೆಗು ತಟಸ್ಥರಾಗಿದ್ದ ನಿವೇದಿತಾ ತಮ್ಮ ಪೂರ್ವಾಶ್ರಮ ಅಂದರೆ ತಮ್ಮ ಹಳೆಯ ಕ್ರೇಜ್ ಆಗಿದ್ದ ಮಾಡೆಲಿಂಗ್ ಕಡೆ ಹೊರಳಿದರು .ಕೆಲವು ಮೂಲಗಳ ಪ್ರಕಾರ ಅವರು 1998-99 ರ ಸಾಲಿನ ಮಿಸ್ ಇಂಡಿಯಾ ಕಂಟೆಸ್ಟಿಗೆ ತಯಾರಿ ಮಾಡಿಕೊಳ್ಳುವ ಭರದಲ್ಲಿದ್ದರು. ಆದರೆ ಚಿತ್ರರಂಗದ ಈ ಸೋಲು ಅಥವಾ ತಿರಸ್ಕಾರ ಅವರನ್ನ ಖಿನ್ನತೆಗೊಡ್ಡಿತೆ ? ಅಥವಾ ಬೇರೆ ಇನ್ಯಾವುದಾದರೂ ಕಾರಣದಿಂದ ಅವರು ಮನೋಸಂತೋಷ ಕಳೆದುಕೊಂಡರೆ ? ಹೀಗೊಂದು ಅನುಮಾನ ಮೂಡಲು ಕಾರಣ 1998 ರ ಅವರ ಒಂದು ಕಿರು ಸಂದರ್ಶನ.. ಹಿರಿ ಸಿನಿ ಪತ್ರಕರ್ತರಾಗಿದ್ದ ಸತ್ಯಮೂರ್ತಿ ಆನಂದೂರು ರವರೆ ಈ ಬಗ್ಗೆ ಒಂದೆಡೆ ಹೇಳಿದ್ದುಂಟು… !

ಒಂದು ಧಾರಾವಾಹಿಯಲ್ಲಿ ನಿವೇದಿತಾರ ಪಾತ್ರಕ್ಕಾಗಿ ಅವರ ಬಳಿ ಬೇಡಿಕೆ ಇಡಲಾಗಿತ್ತು.. ಅದರ ಬಗ್ಗೆ ಮಾತಾಡಲು ನಿವೇದಿತಾರ ಮನೆಗೆ ಸತ್ಯಮೂರ್ತಿಯವರಿಗೆ ಆಹ್ವಾನ ಬಂದದ್ದರಿಂದ ಅವರು ಸ್ವತಃ ರಾಜರಾಜೇಶ್ವರಿನಗರದ ಜೈನ್ ರ ನಿವಾಸಕ್ಕೇ ಬಂದಿದ್ದರು

ಮಹಡಿ‌ ಮೆಟ್ಟಿಲುಗಳನ್ನ ಇಳಿದು ನಮ್ಮೆಡೆಗೆ ನಡೆದು ಬಂದ ನಿವೇದಿತಾರ ಮೊಗದಲ್ಲಿ ಅವ್ಯಕ್ತ ಬೇಸರಿಕೆ ಕಂಡಿತೆಂದೂ .. ಅವರ ಕಳಾಹೀನಗೊಂಡಿದ್ದ ಮುಖದಲ್ಲಿನ ಮನೊ ದುಗುಡ ನಮಗೆ ಸ್ಪಷ್ಟವಾಗಿ ಕಾಣುತ್ತಿತ್ತೆಂದು ಅವರು ಇತ್ತೀಚೆಗೆ ನಿವೇದಿತಾರನ್ನ ಸ್ಮರಿಸುವಾಗ ಈ ಕುರಿತು ಹಂಚಿಕೊಂಡರು.

ಈ ಸಂದರ್ಶನ ಮುಗಿದ ಕೆಲವೇ ದಿನಗಳಲ್ಲಿ ನಡೆದದ್ದೆ ಆ ದುರಂತ ! ಅಂದು ಕೆಳಕ್ಕೆ ಬಿದ್ದ ನಿವೇದಿತಾ ಪುನಃ ಮೇಲೇಳಲೆ ಇಲ್ಲ. 24 ದಿನಗಳ ನಿರಂತರ ಚಿಕಿತ್ಸೆಯ ದೆಸೆಯಿಂದಲು ನಿವೇದಿತಾ ಬದುಕಿ ಬರಲಿಲ್ಲ.. ಆಕೆ ಸಾಯುವ ಒಂದು ದಿನದ ಮುಂಚೆ ಅಂದರೆ ಜೂನ್ 9 ರ ಬೆಳಿಗ್ಗೆ ಆಕೆಯ ಕುಟುಂಬದವರು ಆಕೆ ಬದುಕಿ ಬರುವ ಬಗ್ಗೆ ಭರವಸೆಯ ಮಾತುಗಳನ್ನಾಡಿದ್ದರು.

ಆದರೆ ನಿವೇದಿತಾ ಎಂದೂ ಬಾರದ ಲೋಕಕ್ಕೆ ಹೊರಟೇ ಹೋದರು.. ಯಾವ ನಿರೀಕ್ಷೆಗಳೂ ಆಕೆಯನ್ನ ಉಳಿಸಲಾಗಲಿಲ್ಲ. ಇದರೊಂದಿಗೆ ನಿವೇದಿತಾರ ಸಾವು ಅಂದಿನ‌ ಮಾಧ್ಯಮ ವಲಯಗಳಲ್ಲಿ ಅನೇಕ ಅನುಮಾನಗಳನ್ನ ಸೃಷ್ಟಿಸಿದ್ದು ಸಹ ಇವತ್ತಿಗೆ ನಿಜ‌!

ಈ ಅನುಮಾನ ಮೊದಲು ಮೂಡಲು ಕಾರಣವೆ ನಿವೇದಿತಾರ ಪರಿವಾರ ..! ನಿವೇದಿತಾರ ತಾಯಿ ಕೊಟ್ಟ ಹೇಳಿಕೆಗಳಲ್ಲಿ ನಿಖರತೆ ಇರಲಿಲ್ಲ. ನಿವೇದಿತಾ ನೃತ್ಯಾಭ್ಯಾಸದಲ್ಲಿದ್ದಾಗ ಮಹಡಿಯಿಂದ ಕಾಲು ಜಾರಿ ಬಿದ್ದಳೆಂದು ಹೇಳಿದ ಇವರೆ ಇನ್ನೊಂದು ಕಡೆ ಆಕೆ ಮಾಡೆಲಿಂಗ್ ಗಾಗಿ ಕ್ಯಾಟ್ ವಾಕ್ ನ ಅಭ್ಯಾಸದಲ್ಲಿದ್ದಾಗ ಬಿದ್ದಳು ಎಂದರು‌. ಈ ಹೇಳಿಕೆಗಳಲ್ಲಿ ಸತ್ಯ ಯಾವುದು ? ಮೇಲಾಗಿ ಹೀಗೆ ಇಬ್ಬಗೆಯ ಹೇಳಿಕೆ ಅವರು ಕೊಡಲು ಕಾರಣವೇನಿತ್ತು ?

ಅಂದಿನ ಮುಖ್ಯಮಂತ್ರಿಯಾಗಿದ್ದ ಜೆ ಎಚ್ ಪಟೇಲರ ಹೆಸರೂ ಸಹ ಈ ಸಾವಿನೊಂದಿಗೆ ತಳುಕು ಹಾಕಿಕೊಂಡದ್ದು ಸುಳ್ಳಲ್ಲ.. ಆ ದಿನ ನಿವೇದಿತಾ ಬಿದ್ದ ದಿನವೆ ಮನೆಯ ಮುಂದೆ ವೇಗವಾಗಿ ಹೊರಟ ಆ ಬಿಳಿ ಕಾರ್ ಯಾರದ್ದು.. ! ಈ ಕಾರನ್ನ ಆವತ್ತು ನೋಡಿದವರು ಸಾಕ್ಷಿಗಿದ್ದರು. !

ನಿವೇದಿತಾ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡರೆ ? ಅಷ್ಟೊಂದು ಹಿಟ್ ಗಳನ್ನ ಕೊಟ್ಟ ಈ ನಟಿಗೆ ನಾಲ್ಕಾರು ಸಿನಿಮಾಗಳ ಸೋಲು ಸಾವಿನ ಕಡೆ ಕೈ ತೋರಿತೆ ? ಆಕೆ ಇಷ್ಟು ದುರ್ಬಲ ಮನಸಿನವಳೆ ?

ನಿವೇದಿತಾ ಪ್ರಫುಲ್ಲ ಮನಸಿನ ಆಶಾಭಾವ ಹೊಂದಿದ್ದ ವ್ಯಕ್ತಿ ಎಂದು ಆಕೆಯನ್ನ ಹತ್ತಿರದಿಂದ ನೋಡಿದವರೆಲ್ಲರಿಗು ತಿಳಿದಿತ್ತು.. ಆತ್ಮಹತ್ಯೆ ಮಾಡಿಕೊಳ್ಳುವಷ್ಟು ಸಂಕುಚಿತ ಸ್ವಭಾವ ಆಕೆಯದಾಗಿರಲಿಲ್ಲ. ಹಾಗಾದರೆ ಆಕೆಯ ಕಡೆಯ ದಿನಗಳಲ್ಲಿ ಆಕೆಯನ್ನ ಬಾಧಿಸಿದ್ದ ಆ ಮೂಕ ನೋವು ಏನು ? ಆಕೆಗೆ ಯಾರಿಂದಲಾದರೂ ಬೆದರಿಕೆ ಇತ್ತೆ ? ಗೊತ್ತಿಲ್ಲ

ಆಕೆಯ ಪರಿವಾರದವರ ಹೇಳಿಕೆಯಲ್ಲಿ ಭಿನ್ನತೆಯಿರಲು ಕಾರಣವೇನು ? ಆಕೆಯ ತಾಯಿಯೆ ನಿವೇದಿತಾರನ್ನ ಮೇಲಿಂದ ತಳ್ಳಿದರೆ ? ಅಥವಾ ಇನ್ಯಾವಾದರೂ ಆಗಂತುಕ ಶಕ್ತಿಗಳು ಇಲ್ಲಿ ತಮ್ಮ ಸಮಯ ಸಾಧಿಸಿಕೊಂಡವೆ ? ನಿವೇದಿತಾರ ಸಾವಿಂದ ಯಾರಿಗೇನು ಲಾಭವಿತ್ತು !?

ಈ ಎಲ್ಲ ಪ್ರಶ್ನೆಗಳೂ ನಿರುತ್ತರವಾಗೇ ಉಳಿದವು ಹಾಗು ಈಗಲು ಉಳಿದಿವೆ ಕೂಡ. ಒಟ್ಟಾರೆ ಓರ್ವ ಉದಯೋನ್ಮುಖ ನಟಿಯನ್ನ ಚಿತ್ರರಂಗ ಕಳೆದುಕೊಂಡದ್ದಂತು ದುರಂತವೆ ಸರಿ.

(ಸಂಗ್ರಹ)

 

Leave a Comment