ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿ ಮಾಧವಿ ಈಗ ಹೇಗಿದ್ದಾರೆ ?
ದಕ್ಷಿಣ ಭಾರತದ, ಒಂದು ಕಾಲದ ಕನ್ನಡದ ಮೇರು ನಟಿಯರಲ್ಲಿ ಮಾಧವಿ ಕೂಡ ಒಬ್ಬರು. ಹೈದರಾಬಾದ್‌ನಲ್ಲಿ ಹುಟ್ಟಿದ್ದ ಮಾಧವಿ ಡಾ.ರಾಜ್‌ಕುಮಾರ್, ಶಿವಾಜಿ ಗಣೇಶನ್, ಎನ್‌ಟಿಆರ್, ಅಮಿತಾಭ್ ಬಚ್ಚನ್, ಕಮಲಹಾಸನ್, ಡಾ.ವಿಷ್ಣುವರ್ಧನ್ ಹಾಗೂ ಚಿರಂಜೀವಿ ಮುಂತಾದ ಮೇರು ಸಿನಿ ನಟರ ಜೊತೆ ಮಾಧವಿ ಅಭಿನಯಿಸಿದ್ದಾರೆ. ೧೯೭೬ರಿಂದ ೧೯೯೬ರ ಅವಧಿಯ ಬಹು ಬೇಡಿಕೆಯ ನಟಿಯಾಗಿದ್ದರು ಮಾಧವಿ. ೧೭ ವರ್ಷಗಳ ಕಾಲ ಲೀಡಿಂಗ್ ನಟಿಯಾಗಿ ಸಿನಿಮಾ ರಂಗದಲ್ಲಿ ಸುಮಾರು ೩೦೦ ಸಿನಿಮಾಗಳಲ್ಲಿ ನಟಿಸಿದ್ದಾರೆ. ದಾಸರಿ ನಾರಾಯಣ ರಾವ್ ಅವರ ‘ತೂರ್ಪು ಪಡಮರ’ ಎಂಬ ತೆಲುಗು ಸಿನಿಮಾ ಮೂಲಕ ಚಿತ್ರರಂಗ ಪ್ರವೇಶ ಮಾಡಿದ್ದ ಇವರು. ನಂತರ ತೆಲುಗು, ತಮಿಳು, ಕನ್ನಡ, ಮಲಯಾಳಂ, ಹಿಂದಿ, ಓರಿಯಾ, ಬೆಂಗಾಳಿ ಭಾಷೆಗಳಲ್ಲಿ ನಟಿಸಿದ್ದಾರೆ. ದೊಡ್ಡ ದೊಡ್ಡ ನಟ-ನಿರ್ದೇಶಕರ ಜೊತೆ ಕೆಲಸ ಮಾಡಿದ ಕೀರ್ತಿ ಮಾಧವಿಗೆ ಸಲ್ಲುತ್ತದೆ. ಆ ಸಮಯ ಅವರ ಸುವರ್ಣಯುಗವಾಗಿತ್ತು. ‘ಖೈದಿ, ಇಂಟ್ಲೊ ರಾಮಯ್ಯ ವೀದಿಲೊ ಕೃಷ್ಣಯ್ಯ, ರಾಜ ಪರ್ವೈ, ತಂಬಿಕ್ಕಿ ಇಂದ ಊರು, ಹಾಲು ಜೇನು, ಅಗ್ನಿಪಥ್, ಮಲಯ ಮಾರುತ ದಂತಹ ಸಿನಿಮಾಗಳಲ್ಲಿ, ವಿಭಿನ್ನ ಪಾತ್ರಗಳನ್ನು ಮಾಡುವ ಮೂಲಕ ಮಾಧವಿ ಹೆಸರಾಗಿದ್ದರು. ‘ಏಕ್ ದೂಕೇ ಕೆ ಲಿಯೇ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶ ಮಾಡಿದ್ದರು.
ಜರ್ಮನಿಯ ಹುಡುಗನ ಜೊತೆ ಮದುವೆ
ಮಾಧವಿಯದ್ದು ಅರೇಂಜ್ ಮ್ಯಾರೇಜ್. ಮಾಧವಿಯ ಹಿತೈಷಿಗಳಾದ ಸ್ವಾಮಿರಾಮ ಅವರ ಅಣತಿಯಂತೆ ಅಮೆರಿಕದಲ್ಲಿರುವ ರಾಲ್ಪ್ ಶರ್ಮಾ ಜೊತೆ ಫೆಬ್ರವರಿ ೧೪, ೧೯೯೬ರಂದು ಮಾಧವಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಅವರ ಪತಿ ಜರ್ಮನಿಯವರು. ಭಾರತದಲ್ಲಿರುವಷ್ಟು ದಿನ ದೇವಸ್ಥಾನಕ್ಕೆ ಹೋಗುವುದು, ಪೂಜೆ ಮಾಡುವುದು, ಸಂಪ್ರದಾಯ ಆಚಾರ-ವಿಚಾರಗಳನ್ನು ಅಷ್ಟೊಂದು ಆಚರಿಸಿದ ಮಾಧವಿ ಅಮೆರಿಕಕ್ಕೆ ಹೋದ ನಂತರದಲ್ಲಿ ಭಾರತೀಯ ಸಂಸ್ಕೃತಿ ಮರೆಯಬಾರದೆಂದು ಗಾಯತ್ರಿ ಮಂತ್ರ, ಮೃತ್ಯುಂಜಯ ಮಂತ್ರ, ಗಣಪತಿ ಸ್ತೋತ್ರವನ್ನು ಹೇಳುತ್ತಾರಂತೆ. ಮಾಧವಿ ಅವರ ಪತಿ ತುಂಬ ಮೃದು ಸ್ವಭಾವದ, ನಂಬಿಕಾರ್ಹ, ಉದಾರಿ ಅಷ್ಟೇ ಅಲ್ಲದೆ ಮಾಧವಿಯನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಾರಂತೆ. ತುಂಬ ಶಾಂತಿಯುತವಾಗಿ, ಪ್ರೀತಿಯಿಂದ ಈ ದಂಪತಿ ಈಗ ವಿದೇಶದಲ್ಲಿ ನೆಲೆಸಿದ್ದಾರೆ.
ಮೂವರು ಹೆಣ್ಣು ಮಕ್ಕಳ ತಾಯಿ
ಮಾಧವಿಗೆ ಟಿಫನಿ, ಪ್ರಿಸಿಲ್ಲ, ಎವಿಲಿನ್ ಎಂಬ ಮೂವರು ಹೆಣ್ಣು ಮಕ್ಕಳಿದ್ದಾರೆ. ಮಾಧವಿ ಮದುವೆಯಾಗಿ ೨೩ ವರ್ಷಗಳು ಕಳೆದಿವೆ. ಮೂರು ಹೆಣ್ಣುಮಕ್ಕಳು, ಪತಿಯ ಜೊತೆಗೆ ವಿದೇಶದಲ್ಲಿ ತುಂಬ ಚೆನ್ನಾಗಿ ಜೀವನ ಸಾಗಿಸುತ್ತಿದ್ದಾರೆ. ಸಂಬಧಿಕರು, ಪತಿ ಜೊತೆ ಸೇರಿ ಮಾಧವಿ ಸ್ವಂತ ಔಷಧ ಉದ್ಯಮವನ್ನು ನಡೆಸಿಕೊಂಡು ಹೋಗುತ್ತಿದ್ದಾರೆ. ಸಿನಿಮಾ ನಟಿಯಾಗಿ, ನಂತರದಲ್ಲಿ ಪೂರ್ಣ ಪ್ರಮಾಣದ ತಾಯಿಯಾಗಿ, ಈಗ ಮಹಿಳಾ ಉದ್ಯಮಿಯಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.