ಮಿನುಗುತ್ತಲೇ ಮರೆಯಾದ ಚಂದನವನದ ಧ್ರುವತಾರೆ “ಸುನೀಲ್” ಯಾನೆ ‘ರಾಮಕೃಷ್ಣ ಶೆಟ್ಟಿ’

Share

ಏಪ್ರಿಲ್ 1,1964ರಂದು ಮಂಗಳೂರಿನ ಬಾರ್ಕೂರು‌ ಎಂಬ ಪುಟ್ಟ ಹಳ್ಳಿಯೊಂದರಲ್ಲಿ ಬಂಟ ಕುಟುಂಬದಲ್ಲಿ ಜಯಶೀಲ ಶೆಟ್ಟಿ ‌ಮತ್ತು ನಿರ್ಮಲಾ ದಂಪತಿಗಳ ಎರಡನೇ ಮಗನಾಗಿ “ರಾಮಕೃಷ್ಣ” ಜನಿಸುತ್ತಾರೆ. ಇವರ ಮೂಲ ಹೆಸರು ರಾಮಕೃಷ್ಣ. ಬಾರ್ಕೂರಿನ ಸಮೀಪದ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಮುಗಿಸಿ, ಉನ್ನತ ಶಿಕ್ಷಣ ಪಡೆಯಲು ಬೆಂಗಳೂರಿನ ಆರ್.ವಿ. ಇಂಜಿನಿಯರಿಂಗ್ ಕಾಲೇಜಿಗೆ ಸೇರುತ್ತಾರೆ‌ ರಾಮಕೃಷ್ಣ.

ನಟನೆಯಲ್ಲಿ ಅತೀವವಾಗಿ ಆಸಕ್ತಿಯನ್ನು ಹೊಂದಿದ್ದರು. ಆರಂಭದ ದಿನಗಳಲ್ಲಿ ಯಕ್ಷಗಾನ ಕಲಾವಿದರಾಗಿದ್ದ ರಾಮಕೃಷ್ಣ ಅವರಿಗೆ‌ ತಾನು ನಟ ಆಗಬೇಕು ಅನ್ನುವ ಆಸೆ ಇತ್ತು. ಅಂದಿನ ಜನಪ್ರಿಯ ಮ್ಯಾಗಜೀನ್ ” ಅಭಿಮಾನಿ”ಗಾಗಿ ಪೋಟೋ ಕಾಮಿಕ್ಸ್ ಮಾಡುತ್ತಿದ್ದರು ಫೋಟೋಗ್ರಾಫರ್ ವಿಶ್ವನಾಥ್ ಸುವರ್ಣ. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಮೊದಲು ಬಣ್ಣ ಹಚ್ಚಿದ್ದೆ “ಸುನೀಲ್”. ಆ ಪೋಟೋದಿಂದಲೇ “ಬಿಸಿ ರಕ್ತ ” “ನಾದ ಸುರಭಿ” ಚಿತ್ರಕ್ಕೆ ನಟಿಸುವ ಅವಕಾಶ ಒದಗಿ ಬಂತು. ಇನ್ನೊಂದಡೆ ಇಂಜಿನಿಯರಿಂಗ್ ಶಿಕ್ಷಣ ಮುಂದುವರೆಯುತ್ತಿತ್ತು.

“ಶೃತಿ” ಚಲನಚಿತ್ರಕ್ಕೆ, ಇದೇ ರಾಮಕೃಷ್ಣರನ್ನು ಸುನೀಲ್ ಆಗಿ ದ್ವಾರಕೀಶ್ ಚಿತ್ರರಂಗದಲ್ಲಿ ಪರಿಚಯಿಸಿದರು.

ದ್ವಾರಕೀಶ್ ಪ್ರೊಡಕ್ಷನ್ಸ್‌ ಆರಂಭವಾಗಿ ಮೊನ್ನೆ ಮೊನ್ನೆಯಷ್ಟೇ ಐವತ್ತು ವರ್ಷಗಳು ಪೂರೈಸಿವೆ. ಯುವ ಪ್ರತಿಭಾವಂತ ಕಲಾವಿದರನ್ನು ಪರಿಚಯಿಸುವಲ್ಲಿ ಮೇಲುಗೈ ಸಾಧಿಸಿದೆ. ಈ ರೀತಿ “ಶೃತಿ” ಚಲನಚಿತ್ರಕ್ಕೆ ಮುಖ್ಯ ಪಾತ್ರಧಾರಿ ನಾಯಕ ನಟನ ಹುಡುಕಾಟದಲ್ಲಿರುತ್ತಾರೆ‌ ನಿರ್ದೇಶಕ ದ್ವಾರಕೀಶ್. ಆಗ ಇವರ ಕಣ್ಣಿಗೆ ಬಿದ್ದ ಹುಡುಗ ರಾಮಕೃಷ್ಣ. ಇದೇ ರಾಮಕೃಷ್ಣರನ್ನು ಸುನೀಲ್ ಆಗಿ ದ್ವಾರಕೀಶ್ ಚಿತ್ರರಂಗದಲ್ಲಿ ಪರಿಚಯಿಸಿದರು. ಆಗ ಚಿತ್ರದಲ್ಲಿ ಅಭಿನಯಿಸಿದವರೆಲ್ಲರೂ‌ ಹೊಸಬರೆ. ಅಂತೂ ಚಿತ್ರೀಕರಣ ಪೂರ್ಣಗೊಂಡಿತು. ಸಿನಿಮಾ‌ ರಿಲೀಸ್ ಆಗೇ‌ ಬಿಡ್ತು.

ಆರಂಭದ ದಿನಗಳಲ್ಲಿ ಕೊಂಚ ನಿರಾಸೆಯ ವಾತಾವರಣ. ಏಕೆಂದರೆ ಈ ಚಿತ್ರ ನೋಡುಗರ ಸಂಖ್ಯೆ ‌ವಿಪರೀತ ಕಡಿಮೆ ಪ್ರಮಾಣ, ಕಾರಣ ಎಲ್ಲರೂ ಹೊಸಬರು. ಈ ಸುದ್ದಿ ತಿಳಿದ ಸುನೀಲ್ ಸ್ನೇಹಿತರ ಜೊತೆಗೆ ಪ್ರಮೋದ್ ಚಿತ್ರ ಮಂದಿರಕ್ಕೆ ಹೊರಡುತ್ತಾರೆ. ಅಲ್ಲಿ ಯಾರೂ ಇಲ್ಲದಿರುವುದನ್ನು ನೋಡಿ ತುಂಬಾ ಅತ್ತಿದ್ದರಂತೆ ಸುನೀಲ್. ಆದರೆ ದೇವರು ಕೈ ಬಿಡಲಿಲ್ಲ. ದಿನ ಉರುಳಿದಂತೆ ಜನ ಬರಲು ಪ್ರಾರಂಭಿಸಿದರು, ಕೊನೆಗೂ ಸಿನಿಮಾ‌ ಶತದಿನೋತ್ಸವ ಆಚರಿಸೆ ಬಿಡ್ತು ನೋಡಿ. ಅಂದಿನಿಂದ ಇಂಜಿನಿಯರಿಂಗ್ ಶಿಕ್ಷಣವನ್ನು ಅರ್ಧದಲ್ಲಿಯೆ ತೊರೆದು ಸಂಪೂರ್ಣವಾಗಿ ತಮ್ಮನ್ನು ತಾವು ಚಿತ್ರರಂಗದಲ್ಲಿ ತೊಡಗಿಸಿಕೊಂಡರು.

ಅಂದಿನ‌ ಸೂಪರ್ ಸ್ಟಾರ್ ಹಿರೋಯಿನ್ ಆದ ಕನಸಿನ ರಾಣಿ ಮಾಲಾಶ್ರೀ ಅವರ ಜೊತೆಯಲ್ಲಿ ಸುನೀಲ್  ಏಳೆಂಟು ಚಿತ್ರದಲ್ಲಿ ಅಭಿನಯಿಸುತ್ತಾರೆ.

ಇಲ್ಲಿಂದ ಸುನೀಲ್ ಮುಟ್ಟಿದ್ದೆಲ್ಲವೂ ಚಿನ್ನವಾಯಿತು. ಟೈಗರ್‌ ಪ್ರಭಾಕರ್, ನವರಸನಾಯಕ‌ ಜಗ್ಗೇಶ್, ರಮೇಶ್ ಅರವಿಂದ್ ಅವರ ಜೊತೆ ಒಟ್ಟಾಗಿ ” ಸಿಬಿಐ ಶಿವ” ಚಿತ್ರದಲ್ಲಿ ನಟಿಸುತ್ತಾರೆ. ಚಿತ್ರ ಎವರೇಜ್ ಹಿಟ್ ಆಯಿತು. ಅಂದಿನ‌ ಸೂಪರ್ ಸ್ಟಾರ್ ಹಿರೋಯಿನ್ ಆದ ಕನಸಿನ ರಾಣಿ ಮಾಲಾಶ್ರೀ ಅವರ ಜೊತೆಯಲ್ಲಿ ‌ ಏಳೆಂಟು ಚಿತ್ರದಲ್ಲಿ ಅಭಿನಯಿಸುತ್ತಾರೆ. ಈ ಜೋಡಿಯ “ಬೆಳ್ಳಿ ಕಾಲುಂಗರ” “ಮೆಚ್ಚಿದ‌ ಮದುಮಗ” “ನಗರದಲ್ಲಿ ನಾಯಕರು” “ಸಿಂಧೂರ ತಿಲಕ” “ಸಾಹಸಿ” “ತವರುಮನೆ ಉಡುಗೊರೆ” “ಮನ ಮೆಚ್ಚಿದ ಸೊಸೆ” “ಸ್ನೇಹದ ಕಡಲಲ್ಲಿ” “ಮಾಲಾಶ್ರೀ ಮಾಮಾಶ್ರೀ” ಚಿತ್ರಗಳು ಸೂಪರ್ ಡೂಪರ್ ಹಿಟ್ ಆಗಿದ್ದವು. ಇದರಿಂದ ಸುನೀಲ್‌ ಮತ್ತು ಮಾಲಾಶ್ರೀ ನಿಜ ಜೀವನದಲ್ಲಿ ಒಂದಾದರೆ‌ ಎಷ್ಟು ಚಂದ ಇರುತ್ತಿತ್ತು ಎಂದು‌ ಹಲವು ಅಭಿಮಾನಿಗಳು ಮಾತನಾಡಿದ್ದರು. ಕೊನೆಗೆ ಮದುವೆ ಆಗಬೇಕೆಂದು ನಿರ್ಧರಿಸಿದ್ದರಂತೆ. ಮುಂದೆ ಹಾಗೇ ಆಗಲೇ ಇಲ್ಲವಲ್ಲ ಅನ್ನೋದು ನಿಜಕ್ಕೂ ಕಣ್ಣೀರು ತರುವಂಥದ್ದು.

ಪ್ರಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಪತ್ನಿ ಪಲ್ಲವಿ ಶೆಟ್ಟಿಯವರ ಕಸಿನ್ ಬ್ರದರ್ ಸುನೀಲ್.

“ಬೆಳ್ಳಿ ಕಾಲುಂಗುರ” ಚಿತ್ರದಿಂದ ಸುನೀಲ್ ಅವರು ಬಹು ಬೇಡಿಕೆಯ ನಟರಾದರು. ಶಿವ ರಾಜಕುಮಾರ್, ವಿ.ರವಿಚಂದ್ರನ್, ಶಶಿಕುಮಾರ್ ಅವರಂತೆಯೇ ಸುನೀಲ್ ಚಿತ್ರರಂಗದಲ್ಲಿ ಬೇರೂರುತ್ತಾರೆ ಎಂದು ಅವರ‌ ಅಭಿಮಾನಿಗಳು ಮಾತನಾಡಿಕೊಂಡರು. ಅನಂತ ನಾಗ್-ಲಕ್ಷ್ಮೀ ಜೋಡಿ ಸಿನಿಮಾ ಹೇಗೆ ಮಹಿಳೆಯರು ಇಷ್ಟ ಪಡುತ್ತಿದ್ದರೋ ಹಾಗೇ ಸುನೀಲ್-ಮಾಲಾಶ್ರೀ ಜೋಡಿಗೂ ಇಷ್ಟಪಡುತ್ತಿದ್ದರಂತೆ. ಪ್ರಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್ ಅವರ ಪತ್ನಿ ಪಲ್ಲವಿ ಶೆಟ್ಟಿಯವರ ಕಸಿನ್ ಬ್ರದರ್ ಸುನೀಲ್.

ಎಲ್ಲಾ ಚೆನ್ನಾಗಿ ನಡೀತಿದೆ ಅನ್ನೋ ಟೈಮ್‌ ನಲ್ಲಿ ದುರಂತ..!

ಎಲ್ಲಾ ಚೆನ್ನಾಗಿ ನಡೀತಿದೆ ಅನ್ನೋ ಟೈಮ್‌ ನಲ್ಲಿ ದುರಂತನೇ ನಡೆದು ಹೋಯಿತು. ಜುಲೈ 23ಕ್ಕೆ ಹೈದರಾಬಾದ್ ನಲ್ಲಿ ಚಿತ್ರೀಕರಣ ಮುಗಿಸಿದ ಸುನೀಲ್, ಜುಲೈ 24,1994ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನಲ್ಲಿ ನಡೆಯುವ ರಸಮಂಜರಿ ಕಾರ್ಯಕ್ರಮಕ್ಕೆ ಸುನೀಲ್ ಮತ್ತು ಮಾಲಾಶ್ರೀ ಜೋಡಿ ಅತಿಥಿಗಳಾಗಿ ಬರಬೇಕಿತ್ತು. ಅಂತು ಹೊರಟು ರಸಮಂಜರಿ ಕಾರ್ಯಕ್ರಮಕ್ಕೆ ಪಾಲ್ಗೊಂಡರು. ಹಾಗೆಯೇ ಆ ಜೋಡಿ ಮತ್ತು ಸುನೀಲ್ ಸೋದರ ಸಂಬಂಧಿ ಸಚಿನ್ ಮಲ್ಲಿ, ಡ್ರೈವರ್ ‌ಕೃಷ್ಣ ಕೂಡ ಇದ್ದರು.ಕಾರ್ಯಕ್ರಮ ಮುಗಿದಾಗ ರಾತ್ರಿ ‌12.00-1.00ಗಂಟೆ. ಆ ರಾತ್ರಿ ಅಲ್ಲೇ‌ ತಂಗಿದ್ದು ಮಾರನೇ ದಿನ ಹೊರಡುವುದು ಸುನೀಲ್ ಅವರ ಪ್ಲಾನ್ ಆಗಿತ್ತು. ಆದರೆ ಡ್ರೈವರ್ ಕೃಷ್ಣ “ಇವತ್ತು ನನ್ ಮಗನ ಬರ್ತ್ ಡೇ ಇದೆ‌ ನಾನು ಹೋಗಲೇಬೇಕು” ಎಂದು ಒತ್ತಾಯಿಸಿದರು. ಈ ಮಾತಿಗೆ ಒಪ್ಪಿದ ಸುನೀಲ್ ಅವರು ಮತ್ತು ಮಾಲಾಶ್ರೀ, ಸಚಿನ್ ಮಲ್ಲಿ ಅವರ ಜೊತೆಗೆ ತಮ್ಮ ಕಾಂಟೆಸ್ಸಾ ಕಾರಿನಲ್ಲಿ ಆ ಕತ್ತಲ ರಾತ್ರಿಯಲ್ಲಿ ಚಿಕ್ಕೋಡಿಯಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು. ರಾತ್ರಿ‌ ಮೂರುವರೆ ಹೊತ್ತಿಗೆ ಕಾರ್ ದಾವಣಗೆರೆ ದಾಟಿತು. 4 ಕ್ಕೆ‌ ಚಿತ್ರದುರ್ಗ ತಲುಪಿ ಮಾದನಾಯಕನಹಳ್ಳಿ ಹೆದ್ದಾರಿಯಲ್ಲಿ ಹೋಗ್ತಿರಬೇಕಾದರೆ ತಮಿಳುನಾಡಿನಿಂದ ಅತಿ ವೇಗವಾಗಿ ಬರುತ್ತಿದ್ದ ಟ್ರಕ್ ಒಂದು ಚಾಲಕನ ನಿಯಂತ್ರಣ ತಪ್ಪಿ ಎದುರು ಬರುತ್ತಿದ್ದ ಸುನೀಲ್ ಅವರ ಕಾರ್ ಮೇಲೆ ಹಾಯಿತು. ಈ‌ ರಭಸಕ್ಕೆ ಕಾರ್ ಹಿಗ್ಗಾ-ಮುಗ್ಗಾ ಪುಡಿ ಪುಡಿಯಾಗಿ ಜಜ್ಜಿ ಹೋಯಿತು. ಡ್ರೈವರ್ ಕೃಷ್ಣ ‌ಸ್ಥಳದಲ್ಲೇ ಕೊನೆಯುಸಿರೆಳೆದರು. ಅವರ ರುಂಡ ಬೇರ್ಪಟ್ಟಿತ್ತು. ಸುನೀಲ್ ಅವರ ಎರಡೂ‌ ಕಾಲು ಮುರಿದು, ಕಾರ್ ಪ್ಲಾಟ್‌ ಫಾರಂ ಮುರಿದು ತಲೆಗೆ ಬಲವಾದ ಹೊಡೆತ ಬಿದ್ದಿತ್ತು. ಮಾಲಾಶ್ರೀ ಮತ್ತು ಸಚಿನ್ ಮಲ್ಲಿಯವರಿಗೆ ಮಲ್ಟಿಪಲ್ ಫ್ರಾಕ್ಚರ್ ಆಗಿತ್ತು,ಅವರಿಗೆ ಪ್ರಜ್ಞೆ ಇರಲಿಲ್ಲ. ಈ ಘಟನೆಯನ್ನು ತಿಳಿದು ಸ್ಥಳೀಯರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು. ಅಭಿಮಾನಿಗಳ ಆಕ್ರಂದನ‌ ಮುಗಿಲು ಮುಟ್ಟಿದ್ದಲ್ಲದೇ, ಆಸ್ಪತ್ರೆಯ ಕಿಟಕಿ, ಗ್ಲಾಸ್ ಗಳನ್ನು ಮುರಿದು ಪುಡಿ ಪುಡಿ ಮಾಡಿದರು. ಆಸ್ಪತ್ರೆ ತರುವಷ್ಟರಲ್ಲೇ ಸುನೀಲ್‌ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. 

ಸುನಿಲ್ ತಾಯಿ ನಿರ್ಮಲಮ್ಮನವರು ಗಿಡವೊಂದನ್ನು ಬೆಳೆಸಿ ದಿನಾಲೂ ನೀರು ಹಾಕಿ ಬೆಳೆಸಿದ್ದಾರೆ. ಅದು ಈಗ ಹೆಮ್ಮರವಾಗಿದೆ. ಅದು ನೀಡುವ ತಂಗಾಳಿಯೇ ಸುನೀಲ್ ಅವರ ನಗು ಎಂದು ತಾಯಿ ಭಾವಿಸಿದ್ದಾರೆ..!! 

ಈ ಸುದ್ದಿ ತಿಳಿದ ಅವರ ತಾಯಿ ಎದೆವೊಡೆದು ಅತ್ತರು. ಬಾರ್ಕೂರಿನ ಅವರ ಮನೆ ಹಿಂದೆಯೇ ಸುನಿಲ್ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಆ‌ ಜಾಗದಲ್ಲೇ ಸುನಿಲ್ ತಾಯಿ ನಿರ್ಮಲಮ್ಮನವರು ಗಿಡವೊಂದನ್ನು ಬೆಳೆಸಿ ದಿನಾಲೂ ನೀರು ಹಾಕಿ ಬೆಳೆಸಿದ್ದಾರೆ. ಅದು ಈಗ ಹೆಮ್ಮರವಾಗಿದೆ. ಅದು ನೀಡುವ ತಂಗಾಳಿಯೇ ಸುನೀಲ್ ಅವರ ನಗು ಎಂದು ತಾಯಿ ಭಾವಿಸಿದ್ದಾರೆ. ಈ ದುರ್ಘಟನೆಯಿಂದ ಕುಟುಂಬವೇ ಮಾನಸಿಕವಾಗಿ ಕುಗ್ಗಿತು‌. ಮದುವೆ ಆಗಬೇಕೆಂದು ನಿರ್ಧರಿಸಿದ್ದ ಮಾಲಾಶ್ರೀ ಅವರ ಮನಸ್ಥಿತಿ ಹೇಗಿತ್ತೇನೋ?? ಎಂದು ನೆನೆಸಿಕೊಂಡರೆ ನಿಜಕ್ಕೂ ‌ಕಣ್ಣೀರು ತರುತ್ತದೆ. ಅಂದು ಕನ್ನಡ ನಾಡು ಕಣ್ಣೀರಿಟ್ಟಿತ್ತು,ಹಲುಬಿತ್ತು. ಸುನೀಲ್ ತೀರಿ ಹೋಗಿ 25 ವರ್ಷ ವಾದರೂ ಆ ನೋವಿಂದ ಅವರ ತಾಯಿ ಇನ್ನೂ ಹೊರ ಬಂದಿಲ್ಲ. ಮನೆಯಲ್ಲಿ ಅವರ ನೆನಪಿಗೆಂದೆ ಫ್ರೇಮ್ ಹಾಕಿಸಿದ ಒಂದು ಫೋಟೋ ಇದೆ, ಅದಕ್ಕೆ ಪ್ಲಾಸ್ಟಿಕ್ ಹೂವಿನ ಮಾಲೆ ಇದೆ.

ಇದು ಯಾರು ಮಾಡಿದ್ದಲ್ಲ, “ಆಕಸ್ಮಿಕ ಮರಣ” ಅಂತ ಕಣ್ಣೀರಿಟ್ಟ ತಾಯಿ…!

“ನನ್ನ ಮಗನ ಸಾವಿಗೆ ಯಾರೂ ಇಲ್ಲದೇ ಇರೋ ಕತೆ ಕಟ್ಬೇಡಿ,ಅವನ ಹಣೆಯಲ್ಲಿ ಬರೆದ ಹಾಗೇ ಆಗಿ ಹೋಯ್ತು, ಇಡೀ ಕನ್ನಡ ಚಿತ್ರರಂಗ ಅವನ ಜೊತೆ ಆತ್ಮೀಯವಾಗೇ ಇತ್ತು, ಇದು ಯಾರು ಮಾಡಿದ್ದಲ್ಲ ಆಕಸ್ಮಿಕ ಮರಣ” ಅಂತ ಕಣ್ಣೀರಿಟ್ಟರು. ಗಾಯಗೊಂಡ ಮಾಲಾಶ್ರೀ ಚೇತರಿಸಿಕೊಂಡರು ಹಾಗೇ ಮಾನಸಿಕವಾಗಿ ಕುಗ್ಗಿದರು. ಸೋದರ ಸಂಬಂಧಿ ಸಚಿನ್ ಮಲ್ಲಿ ಸ್ವಲ್ಪ ದಿನಗಳಲ್ಲಿ ಚೇತರಸಿಕೊಂಡರು, ಅವರು ಇವಾಗ ಅಮೇರಿಕಾದಲ್ಲಿ ನೆಲೆಸಿದ್ದಾರೆ.

1989ರಲ್ಲಿ “ನಂಜುಂಡಿ ಕಲ್ಯಾಣ” ಚಿತ್ರದ ಮೂಲಕ ಅಪಾರ ಯಶಸ್ಸನ್ನು ಗಳಿಸಿದ‌ರು ಮಾಲಾಶ್ರೀ, ಅದೇ ವರ್ಷ‌ ರಸ್ತೆ ಅಪಘಾತದಲ್ಲಿ ಹೆತ್ತ ತಾಯಿಯನ್ನು ಕಳೆದುಕೊಂಡರು. ಇದಾದ ನಾಲ್ಕೇ ವರ್ಷಕ್ಕೆ “ಸುನೀಲ್ ಅವರ ರಸ್ತೆ ಅಪಘಾತ” ಅವರಿಗೆ ವಿಪರೀತ ನೋವು ಕೊಟ್ಟಿತ್ತಲ್ಲದೆ ಆ ಘಟನೆಯಿಂದ ಹೊರ ಬರಲು ಸುಮಾರು ತಿಂಗಳು ಬೇಕಾಯಿತು. ಆ ರಾತ್ರಿ ಡ್ರೈವರ್ ಮಾತು ತಿರಸ್ಕರಿಸಿ ಹೊರಡದೇ ಇದ್ದಲ್ಲಿ ಸುನೀಲ್ ಇವತ್ತು ದೊಡ್ಡ ಹಿರೋ ಆಗಿ ಕನ್ನಡದಲ್ಲಿ ಇರ್ತಾ ಇದ್ರು. ಬಹುಶಃ ಇವರಷ್ಟು ಚಂದದ ಹಿರೋ ಮುದ್ದಾದ ಮುಖದ ಹಿರೋ ಆ ಸಮಯದಲ್ಲಿ ಯಾರಿದ್ರು ನೀವೆ ಹೇಳಿ??? of course ಸುನೀಲ್ ಒಬ್ಬರೆ.

ಏನ್ ವಿಪರ್ಯಾಸ ನೋಡಿ ಸ್ನೇಹಿತರೇ.ಇದು ಒಂಥರಾ ನಿಗೂಢ ರಹಸ್ಯನೋ?? ಚಿದಂಬರ ರಹಸ್ಯನೋ‌‌ ?? ನನಗಂತೂ ಗೊತ್ತಿಲ್ಲ. ಯಮಧರ್ಮ ಈ ಇಬ್ಬರು ತಾರೆಯರನ್ನು ಅರೆ ವಯಸ್ಸಿನಲ್ಲಿ ಎತ್ತಾಕೊಂಡ್ ಹೋಗ್ಬೇಕು ಅನ್ಕೊಂಡಿದ್ದ ಅನ್ಸತ್ತೆ‌. ಈ ಇಬ್ಬರ ಸಾವಿನ ಸಾಮ್ಯತೆ ನೋಡಿ .. ಆ ಮತ್ತೊಂದು ತಾರೆ ಯಾರೆಂದರೆ ಅದು ಶಂಕರ್ ನಾಗ್..!! 

ಶಂಕರ್ ನಾಗ್ ಮತ್ತು ಸುನೀಲ್ ಅವರ ಮರಣಕ್ಕೆ ಅದೇನೋ ಒಂಥರಾ ಸಂಬಂಧ. ಅದರ ಸತ್ಯ ಕಥಾತೋರಣ ಒಂದೊಂದಾಗಿ ‌ಇದೆ ನೋಡಿ.

  1. ಶಂಕರ್ ನಾಗ್‌ ಅವರು ತೀರಿಕೊಂಡಿದ್ದು ಕಾರ್ ಆ್ಯಕ್ಸಿಡೆಂಟ್ ನಲ್ಲೇ, ಹಾಗೇ ಸುನೀಲ್ ಅವರು ತೀರಿಕೊಂಡಿದ್ದು ಕಾರ್ ಆ್ಯಕ್ಸಿಡೆಂಟ್ನನಲ್ಲೇ.
  2. ಇಬ್ಬರೂ ನಮ್ಮನ್ನಗಲ್ಲಿದ್ದು ಅದೇ ದಾವಣಗೆರೆ-ಚಿತ್ರದುರ್ಗ ಹೈವೇಯಲ್ಲಿ…
  3. ಶಂಕರ್ ನಾಗ್ ಅವರು ಹೋಗಿದ್ದು ಸೆಪ್ಟೆಂಬರ್ 30,1990 ರವಿವಾರದಂದು,ಅದು ಬೆಳಿಗ್ಗೆ‌ 4.30 ರ ಹೊತ್ತಿಗೆ.. ಸುನೀಲ್ ಜುಲೈ ‌25,1994 ರವಿವಾರದಂದು, ಅದು ಬೆಳಿಗ್ಗೆ 4.30ರ ಹೊತ್ತಿಗೆ. ನೋಡಿ ಎರಡು ಸಾವು ಸಂಭವಿಸಿದ್ದು ರವಿವಾರದಂದೆ.. ಒಂದೇ ಸಮಯದಲ್ಲಿ…
  4. ಶಂಕರ್ ನಾಗ್ ಅವರ‌ ಜೊತೆ ಅವರ ಫಿಯೇಟ್ ಕಾರಿನಲ್ಲಿ ಪ್ರಯಾಣ ಮಾಡಿದ್ದು ಅವರ ಹೆಂಡತಿ, ಮಗು ಮತ್ತೆ ಡ್ರೈವರ್ ಲಿಂಗಯ್ಯ… ಒಟ್ಟಾರೆ ನಾಲ್ಕು ಜನ. ಸ್ಥಳದಲ್ಲೇ ಸತ್ತಿದ್ದು ಡ್ರೈವರ್ ಲಿಂಗಯ್ಯ ಮತ್ತು ಶಂಕರ್ ನಾಗ್…ಹೋಗಿದ್ದು ಎರಡು ಜೀವವಾದದರೆ ಬದುಕುಳಿದದ್ದು ಎರಡು ಜೀವ… ಹಾಗೇ ಇವರ ಸಾವಿನಲ್ಲೂ ಅವರ ಸ್ವಂತ ಅಂದಿನ ಪ್ರತಿಷ್ಠಿತ ಕಾಂಟೆಸ್ಸಾ ಕಾರಿನಲ್ಲಿ ಪ್ರಯಾಣ ಬೆಳೆಸಿದ್ದು ನಾಲ್ವರು, ಡ್ರೈವರ್ ಕೃಷ್ಣ, ಸುನೀಲ್ ಸೋದರ ಸಂಬಂಧಿ ಸಚಿನ್ ಮಲ್ಲಿ, ಸುನೀಲ್ ಹಾಗೇ ಮಾಲಾಶ್ರೀ. ಇಲ್ಲೂ ಹಾಗೇ ಡ್ರೈವರ್ ಕೃಷ್ಣ ಸ್ಥಳದಲ್ಲೇ ಸಾವನ್ನಪ್ಪಿದರು, ಸುನೀಲ್‌ ಚಿತ್ರದುರ್ಗದ ಆಸ್ಪತ್ರೆಯಲ್ಲಿ ಒದ್ದಾಡಿ ಒದ್ದಾಡಿ ಪ್ರಾಣ ಬಿಟ್ಟರು. ಅಪಘಾತದಲ್ಲಿ ಹೋಗಿದ್ದು ಎರಡು ಜೀವವಾದರೆ ಬದುಕುಳಿದದ್ದು ಎರಡು ಜೀವ…. ಇಲ್ಲಿಯೂ ಸತ್ತಿದ್ದು ಡ್ರೈವರ್ ಮತ್ತು ನಟ.. ಹಾಗೇ‌ ಅಲ್ಲಿಯೂ ಸೇಮ್…. ಏನ್ ಹೊಂದಾಣಿಕೆ ನೋಡಿ…
  5. ಆಗಲೇ ಹಲವಾರು ಪ್ರಖ್ಯಾತ ನಿರ್ದೇಶಕರ ಕೈಕೆಳಗೆ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ‌ “ಸುಧೀಂದ್ರ ‌ಕಲ್ಲೋಳ್” ಮುಂದೆ ತಾವು ಸ್ವತಂತ್ರ ನಿರ್ದೇಶಕರು ಆಗಬೇಕೆಂದು‌ ಕೊಂಡಿದ್ದರು.ಈ ಸುಧೀಂದ್ರ ಕಳ್ಳೋಳ್ ಬೇರೆ ಯಾರು ಅಲ್ಲ,
    ಶಂಕರ್ ನಾಗ್ ಅವರು ಸಾವನ್ನಪ್ಪುವ ಮುನ್ನ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸ ಬೇಕಿದ್ದ ವ್ಯಕ್ತಿ ಹಾಗೇ ಸುನೀಲ್ ಅವರು ಸಾವನ್ನಪ್ಪುವ ಮುನ್ನ ಅವರ ಮುಂದಿನ ಚಿತ್ರವನ್ನು ನಿರ್ದೇಶಿಸ ಬೇಕಿದ್ದ ವ್ಯಕ್ತಿಯೇ ಈ ಸುಧೀಂದ್ರ ‌ಕಲ್ಲೋಳ್. ತಾನು ಕೈ ಹಾಕಿದ ಎರಡೂ ಯೋಜನೆಗಳು ಹೀಗಾಯ್ತಲ್ಲ??ಎಂದು ಬೇಜಾರು ಪಟ್ಟು ಮುಂದೆ ಇವರು ನಿರ್ದೇಶನ‌ ಮಾಡುವ ಕೆಲಸಕ್ಕೆ ಕೈ ಹಾಕಲಿಲ್ಲ. ಈ ಎರಡೂ ನಟರ ಮುಂದಿನ ಚಿತ್ರದ ನಿರ್ದೇಶಕರು ಒಬ್ಬರೇ ಆಗಿದ್ದರು ಅನ್ನುವುದು ವಿಚಿತ್ರ ಅಲ್ದೇ ಇನ್ನೇನೂ???

ಈ ಸೆಪ್ಟೆಂಬರ್ 30ಕ್ಕೆ ಶಂಕರ್ ನಾಗ್ ಅಗಲಿ‌ 30 ವರ್ಷಗಳು.. ಹಾಗೇ ಜುಲೈ 25ಕ್ಕೆ ಸುನೀಲ್ ಅಗಲಿ‌ 26 ವರ್ಷಗಳು…

ಆ ನಾಲ್ಕು ವರ್ಷದ ಅಂತರದಲ್ಲಿ ಎರಡೂ ಸೂಪರ್ ಸ್ಟಾರ್ಸ್ ಗಳನ್ನು, ಎರಡು ವಜ್ರಗಳನ್ನು ಚಂದನವನ ಕಳೆದುಕೊಂಡಿತು. ಶಂಕರ್ ನಾಗ್ ಅವರ ಸಾವಿನ ನೋವು ಅರಗಿಸಿಕೊಳ್ಳಲಾಗದ ಅಭಿಮಾನಿಗಳು ಕೆಲ ವರ್ಷದಲ್ಲೇ ಇನ್ನೊಂದು ಚಾಕಲೇಟ್ ಹಿರೋರನ್ನು ಕಳೆದುಕೊಂಡು ವಿಪರೀತ ಕಣ್ಣೀರಿಡುವಂತಾಯಿತು. ಏನೇ ಆಗಲಿ ಈ ತರ ನೋವು ಯಾರಿಗೂ ಆಗೋದೆ ಬೇಡ.. ಯಾರ ಮನೆಯಲ್ಲೂ ಆಗೋದು ಬೇಡ.. ಇದು ಆಗಿದ್ದು ಆಗಿ ಹೋಗಿದೆ… ಈ ಎರಡೂ ಸಾವಂತು ಅಭಿಮಾನಿಗಳ ಹೃದಯದಲ್ಲಿ ಸದಾ ಕಾಡುವಂಥದ್ದು…. ಈ ತರ ನಷ್ಟ ಯಾವುದೇ ಚಿತ್ರರಂಗಕ್ಕೆ ಆಗದೇ ಇರಲಿ.

ಮತ್ತೇ ಏನ್ ಬರೀಲಿ ನಾನು?? ಇವಾಗ ಆವಾಗ ಸುನಿಲ್ ಅವರನ್ನು ಎಲ್ಲರೂ ಮರೆತಿದ್ದಾರೆ‌, ಮರೀತಾನೆ ಇದ್ದಾರೆ. ಈಗಿನ ಯುವ ಪೀಳಿಗೆಗೆ ಸುನೀಲ್ ಅಂದರೆ ಯಾರು ಅಂತಾನೇ ಗೊತ್ತಿಲ್ಲ ಅನ್ನೋದು‌ ನನ್ನ ಅನಿಸಿಕೆ, ಅವರ ಕುರಿತಾದ ಯಾವುದೇ ಲೇಖನ ಫೇಸ್ಬುಕ್ ಟ್ವಿಟರ್ …ಇತ್ಯಾದಿ ಸಾಮಾಜಿಕ ಜಾಲ ತಾಣಗಳಲ್ಲಿ ‌ಹರಿಬಿಟ್ಟಿಲ್ಲ ಅನ್ನೋದು ಬೇಜಾರು. ಮುಂದೆ ನಾವೆಲ್ಲರೂ ಹೋಗೋ ಜಾಗಕ್ಕೆ ಇನ್ನೂ ಬದುಕಿ ಬಾಳ ಬೇಕಿದ್ದ, ಜೀವನದ ನೋವು-ನಲಿವನ್ನು, ಸುಖ-ದುಖಗಳನ್ನು ಎದುರಿಸಬೇಕಿದ್ದ 30ರ ಎಳೆಜೀವ ಭೀಕರ ರಸ್ತೆ ಅಪಘಾತದಲ್ಲಿ ದುರ್ಮರಣಗೊಂಡಿದ್ದು ಪ್ರತಿಯೊಬ್ಬರಿಗೂ ನೋವು ತರುವಂತದ್ದೆ.

— ನಿತಿನ್ ಅಂಕೋಲ

Leave a Comment