ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ ಚೆಲುವೆ…!

Share
Photo Credit : Instagram

“ನಮ್ ಮನೆಗಾ ಎಲ್ರೂ ಜೋಡಿ ಉತ್ತರ ಕರ್ನಾಟಕದಾಗ ಮಾತ್ ಆಡ್ತೀವಿ , ಅದ್ರಾ ಏನ್ ಮಾಡೋದೈತ್ರಿ ಬಾಳ್ ಮಂದಿಗೆ ಅರ್ಥ ಆಗೋದಿಲ್ಲ” ಅಂತಾರ ನಮ್ಮ ಅದಿತಿ ಪ್ರಭುದೇವನವರು. ಉತ್ತರ ಕರ್ನಾಟಕ ಭಾಷೆಯನ್ನು ಬೆಣ್ಣೆಯಂತೆ ಮಾತಾಡುವ ಚೆಲುವೆ ಅದಿತಿ, ಅವರಿಗೆ ಬೆಂಗಳೂರು ಕನ್ನಡ, ಮಂಡ್ಯ ಕನ್ನಡ, ದಾವಣಗೆರೆ ಕನ್ನಡ ಹಾಗೆ ಚೂರ್ ಚೂರ್ ಮಂಗಳೂರು ಭಾಷೆ ಮಾತ್ ಅಡಲಿಕ್ಕೆ ಬರ್ತಾತಿ”. ನಮ್ಮ ನಾಡು, ನಮ್ಮ ಭಾಷೆ ಎಂದಿಗೂ ನಮ್ಮ ಸ್ವತ್ತು ಎಂದು ಸಾರುವ ಸ್ಯಾಂಡಲ್‌ವುಡ್ ಬೆಡಗಿ ಅದಿತಿ ಪ್ರಭುದೇವ, ಬೆಣ್ಣೆದೋಸೆಗೆ ಹೆಸರು ವಾಸಿಯಾಗಿರುವ ನಮ್ಮ ದಾವಣಗೆರೆ ಜಿಲ್ಲೆಯಲ್ಲಿ 1994 ಜನವರಿ 01ರಂದು ಜನಿಸಿದರು.

Photo Credit : Instagram

ಅದಿತಿಯವರು 2016ರ ಸುವರ್ಣ ಚಾನೆಲ್‌ನ ‘ಗುಂಡ್ಯಾನ್ ಹೆಂಡ್ತಿ ‘ ಎಂಬ ಧಾರಾವಾಹಿ ಮೂಲಕ ನಟನೆಯ ಕ್ಷೇತ್ರಕ್ಕೆ ಆಗಮಿಸಿದರು. ನಂತರ ಕಲರ್‌ ಸೂಪರ್‌ನ “ನಾಗ ಕನ್ನಿಕೆ” ಧಾರಾವಾಹಿಯಲ್ಲಿ ಶಿವಾನಿ ಪಾತ್ರದಿಂದ ಮನೆಮಾತಾದರು. 2017ರಲ್ಲಿ ಶಿವ ತೇಜಸ್ ನಿರ್ದೇಶಿಸಿದ ‘ಧೈರ್ಯಂ’ ಚಿತ್ರದಲ್ಲಿ ಅಜಯ್ ರಾವ್ ಜೊತೆಗೆ ನಾಯಕಿನಟಿಯಾಗಿ ಅಭಿನಯಿಸಿದ್ದಾರೆ. ನಂತರ, ಬಜಾರ್, ಆಪರೇಷನ್ ನಕ್ಷತ್ರ, ಬ್ರಹ್ಮಚಾರಿ ಚಿತ್ರಗಳಲ್ಲಿ ನಟಿಸಿ, ಸಾಕಷ್ಟು ಸದ್ದು ಮಾಡಿದರು.

Photo Credit : Instagram
Photo Credit : Instagram

“ಪರಪಂಚಾನೆ ಒಂದು ರೌಂಡು ಹಾಕೊಂಡ್ ಬಂದ್ರು ಇಂತಾ ಚೆಲುವೆ ಸಿಗಕ್ಕಿಲ್ಲ ಇವಳ ಅಂದ ವರ್ಣಿಸೋಕೆ ಒಂದು ಜನ್ಮ ಸಾಲಕ್ಕಿಲ್ಲ ಶಾನೆ ಟಾಪ್ ಆಗವ್ಳೆ ನಮ್ಮ ಹುಡುಗಿ ಶಾನೆ ಟಾಪ್ ಆಗವ್ಳೆ” ಈ ಹಾಡು ‘ಸಿಂಗ’ ಚಿತ್ರದಾಗಿದ್ದು, ಈ ಹಾಡು ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡಿಂಗ್ ಸಾಲಿನಲ್ಲಿದೆ, ಜೊತೆಗೆ ಅದಿತಿರವರಿಗೆ ಇಂದು ಕೂಡ ಹೆಚ್ಚು ಜನಪ್ರಿಯತೆಯನ್ನು ನೀಡಿದೆ‌. ಇದನ್ನು ಚೇತನ್ ಕುಮಾರ್ ಬರೆದರೆ, ಹಾಡನ್ನು ವಿಜಯ್ ಪ್ರಕಾಶ್ ರವರು ಹಾಡಿದ್ದಾರೆ. ‘ಸಿಂಗ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಜೊತೆಗೆ ಅದಿತಿ ಪ್ರಭುದೇವ ನಾಯಕಿನಟಿಯಾಗಿ ನಟಿಸಿದ್ದಾರೆ.

Photo Credit : Instagram

ಅಲ್ಲದೇ 2019ರಲ್ಲಿ “ರಂಗನಾಯಕಿ” ಚಿತ್ರದಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗುವ ಯುವತಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. “ರಂಗನಾಯಕಿ” ಚಿತ್ರದಲ್ಲಿ ಅದಿತಿ ಪ್ರಭುದೇವರವರು, ಅತ್ಯಾಚಾರದಿಂದ ಬದುಕುಳಿದವರ ಮೊದಲ ಹೆಜ್ಜೆ ಏನಾಗಿರಬೇಕು ಮತ್ತು ಎಲ್ಲಾ ವಿಲಕ್ಷಣಗಳ ವಿರುದ್ಧ ಹೋರಾಡಲು ಅವಳು ಹೇಗೆ ಧೈರ್ಯದಿಂದ ಎದುರಿಸಬೇಕು ಎನ್ನುವುದೇ ಚಿತ್ರದ ಕಥೆಯಾಗಿದೆ. ಚಿತ್ರದ ಕಥೆಯನ್ನು ಬರೆದ ದಯಾಳ್ ಪದ್ಮನಾಭನ್ ನವರು ಕಥೆ ಹೇಳುತ್ತಿದಂತೆ ಅದಿತಿಯವರಿಗೆ ಸ್ವತಃ ತಮಗೆ ಆಗಿರುವ ಅನುಭವಾಗಿದಂತಾಗಿ ಕಣ್ಣೀರು ಬಂತು ಎಂದು ಮಾಧ್ಯಮ ಸಂದರ್ಶನಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಸಿನಿಮಾದ ಪಾತ್ರಕ್ಕೆ ನೈಜತೆಯಾಗಿ ಅಭಿನಯಿಸಿರುವ ಅದಿತಿ ಪ್ರಭುದೇವರವರಿಗೆ ರಂಗನಾಯಕಿ ಚಿತ್ರಕ್ಕಾಗಿ “ಚಂದನವನ ಚಲನಚಿತ್ರ ವಿಮರ್ಶಕರ ಅತ್ಯುತ್ತಮ ನಟಿ” ಪ್ರಶಸ್ತಿಯನ್ನು ಪಡೆದಿದ್ದಾರೆ.

Photo Credit : Instagram

ಇವುಗಳಲ್ಲದೇ ಸಾಮಾಜಿಕ ತಾಣವಾದ ಯುಟ್ಯೂಬ್‌ನಲ್ಲಿ “ಅದಿತಿ ಪ್ರಭುದೇವ” ಹೆಸರಿನ ಚಾನೆಲ್ ಮತ್ತು ಇನ್ಸ್ಟಾಗ್ರಾಮ್ ನಲ್ಲಿ ಸಕ್ರಿಯವಾಗಿದ್ದಾರೆ. ಇತ್ತೀಚಿಗೆ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಸಂಗಾತಿ ಕಾಫಿ ಪ್ಲಾಂಟರ್ ಮತ್ತು ಉದ್ಯಮಿಯಾಗಿರುವ “ಯಶಸ್” ಅವರೊಂದಿಗೆ ಇರುವ ಫೋಟೋವನ್ನು ಹಂಚಿಕೊಳ್ಳುವ ಜೊತೆಗೆ “ಡ್ರೀಮ್ ಕೇಮ್ ಟ್ರೂ ಲೈಕ್ ಎ ಡ್ರೀಮ್” ಎಂಬ ಶೀರ್ಷಿಕೆಯನ್ನು ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅಚ್ಚರಿಗೊಳಿಸಿದ್ದಾರೆ. ಅಲ್ಲದೇ ತಮ್ಮ ಹುಟ್ಟು ಹಬ್ಬದಂದು ಕುಶಲ್ ಗೌಡ ನಿರ್ದೇಶನದ “ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ” ಹೊಸ ಪೋಸ್ಟರ್‌ನಲ್ಲಿ ಅದಿತಿ ಪ್ರಭುದೇವರವರು ಆಕರ್ಷಕವಾಗಿ ಮತ್ತು ವಿಭಿನ್ನ ಪಾತ್ರದಲ್ಲಿ ನಟಿಸುತ್ತಿರುವ ಸುದ್ದಿ ಹೊರಬಿದ್ದಿದೆ. ಚಂದನವನದಲ್ಲಿ ಭರವಸೆ ಮೂಡಿಸುತ್ತಿರುವ ಅದಿತಿ ಪ್ರಭುದೇವರವರಿಗೆ ಸದಾಕಾಲ ಯಶಸ್ಸು ಸಿಗಲಿಯೆಂದು ನಮ್ಮ ಸೂಪರ್ ಸ್ಟಾರ್ಸ್ ತಂಡ ಕೂಡ ಶುಭ ಹಾರೈಸುತ್ತದೆ.

Photo Credit : Instagram ತಮ್ಮ ಸಂಗಾತಿ ಕಾಫಿ ಪ್ಲಾಂಟರ್ ಮತ್ತು ಉದ್ಯಮಿಯಾಗಿರುವ “ಯಶಸ್” ಅವರೊಂದಿಗೆ

Leave a Comment